

ಬೆಂಗಳೂರು: ಜಟ್ಟಿಗನಹಳ್ಳಿ ಸ್ಮಶಾನದ ಖಾಲಿ ಜಾಗದಲ್ಲಿ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಮೃತಪಟ್ಟವರ ಹೆಸರು ಗೌರಿ ಎಂದು ತಿಳಿದು ಬಂದಿದ್ದು, ಈ ಸಂಬಂಧ ಬೆಂಜಮೀನ್ ಎಂಬುವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಜಮೀನ್ ಎಂಬುವರು ಬುಧವಾರ ಬೆಳಗ್ಗೆ ೧೦.೩೦ ರ ವೇಳೆ ಬನಶಂಕರಿ ೬ ನೇ ಹಂತದ ೧೦ ನೇ ಬ್ಲಾಕ್, ಜಟ್ಟಿಗನಹಳ್ಳಿ ಸ್ಮಶಾನದ ಖಾಲಿ ಜಾಗದ ಬಳಿ ಬಹಿರ್ದೆಸೆಗೆ ಹೋಗಿದ್ದಾಗ ಮಹಿಳೆಯೊಬ್ಬರು ಅಂಗಾತವಾಗಿ ಮಲಗಿಕೊಂಡಂತೆ ಕಾಣಿಸಿದ್ದು, ಸ್ವಲ್ವ ಹತ್ತಿರ ಹೋಗಿ ನೋಡಿದ್ದಾಗ ಸುಮಾರು ೨೫ ರಿಂದ ೩೦ ವರ್ಷದ ಮಹಿಳೆ ಕೊಲೆಯಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ. ಮೃತ ದೇಹದ ಬಳಿ ರಕ್ತ ಚೆಲ್ಲಿರುವುದು ಕುತ್ತಿಗೆಗೆ ಚಾಕುವಿನಿಂದ ಚುಚ್ಚಿರುವುದು ಕಂಡು ಬಂದಿದೆ. ನಂತರ ಅವರು ಪೊಲೀಸ್ ಸಹಾಯವಾಣಿಯಾದ ೧೧೨ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದ್ದು ಕೆಂಗೇರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪತಿಯ ಮೇಲೆ ಶಂಕೆ
ಮೃತಳಾದವರ ಹೆಸರು ಗೌರಿ ಎಂದು ತಿಳಿದು ಬಂದಿದ್ದು, ಈತನ ಪತಿ ನಾಗೇಶ್ ಎಂದು ಗೊತ್ತಾಗಿದೆ. ಈತನೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದಂಪತಿ ೮ ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರ ನಡುವೆ ಕೌಟುಂಬಿಕ ಕಲಹವಿದ್ದು, ಆಗಾಗ ಜಗಳ ಮಾಡುತ್ತಿದ್ದರು. ನಾಗೇಶ್ ಗೌರಿಯನ್ನು ಸುಮಾರು ಐದಾರು ವರ್ಷಗಳ ಕಾಲ ಬೇರೆ ಊರಿನಲ್ಲಿ ಬಿಟ್ಟಿದ್ದ. ಕಳೆದ ಮೂರು ದಿನಗಳ ಹಿಂದೆ ಗೌರಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಮತ್ತೆ ಅವರಿಬ್ಬರು ಮಂಗಳವಾರ ಸಂಜೆ ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಾಗೇಶ್ ಗೌರಿಯನ್ನು ಸಶ್ಮಾನದ ರಸ್ತೆಯ ಕರೆದುಕೊಂಡು ಹೋಗಿ ಜಗಳ ಮಾಡಿ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ವಿಶೇಷ ತಂಡವನ್ನು ರಚನೆ ಮಾಡಿಕೊಂಡು ಆರೋಪಿಯ ಬಂಧನಕ್ಕಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.