ಚಿನ್ನದ ಸರ ಕದ್ದಿದ್ದ ಮಹಿಳೆ ಸೆರೆ

Arrest
Published on

ಬೆಂಗಳೂರು: ಸೋದರ ಸಂಬಂಧಿಯ ಚಿನ್ನದ ಸರ ಕಳವು ಮಾಡಿದ್ದ ಮಹಿಳೆಯನ್ನು ದಂಡು ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಠದಹಳ್ಳಿ ನಿವಾಸಿ ಚಂದ್ರಶರ್ಮಾ ಬಂಧಿತೆ. ಈಕೆಯಿಂದ 8.51 ಲಕ್ಷ ರೂ. ಮೌಲ್ಯದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಕೇರಳದಿಂದ ನಗರಕ್ಕೆ ಬರುವಾಗ ರೈಲಿನಲ್ಲಿ ನಾಗವಾರಪಾಳ್ಯದ ಲಲಿತಾ ಎಂಬಾಕೆಯ ಚಿನ್ನಾಭರಣವನ್ನು ಕಳವು ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಜ.25ರಂದು ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಸಂಬಂಧಿಕರ ಗೃಹ ಪ್ರವೇಶಕ್ಕೆ ಹೋಗಿದ್ದ ಲಲಿತಾ, 2 ದಿನಗಳ ಬಳಿಕ ಬಂಧುಗಳ ಜತೆ ಕೊಚ್ಚುವೇಲಿ- ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ನಗರಕ್ಕೆ ಮರಳಿದ್ದರು. ಕೆ.ಆರ್.ಪುರ ನಿಲ್ದಾಣದಲ್ಲಿ ಇಳಿದು ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿತ್ತು.

ಲಲಿತಾ ಜತೆ ಕೇರಳದಿಂದ ಪ್ರಯಾಣಿಸಿದ್ದ ಸಂಬಂಧಿ ಚಂದ್ರ ಶರ್ಮಾ ದಂಡು ರೈಲು ನಿಲ್ದಾಣದಲ್ಲೇ ಇಳಿದಿದ್ದಳು. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಚಂದ್ರಶರ್ಮಾ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net