ಬಾಟಲಿಯಿಂದ ಎಎಸ್‌ಐಗೆ ಚುಚ್ಚಿದ ಮಹಿಳೆ

Crime Logo
Published on

ಬೆಂಗಳೂರು: ಆಸ್ತಿ ವಿವಾದದ ಪ್ರಕರಣದಲ್ಲಿ ತನಗೆ ಸಹಾಯ ಮಾಡಲಿಲ್ಲ ಎಂದು ಮಹಿಳೆಯೊಬ್ಬರು ಕರ್ತವ್ಯ ನಿರತ ಸಹಾಯಕ ಸಬ್ ಇನ್‌ಸ್ಪೆಕ್ಟರ್(ಎಎಸ್‌ಐ)ಗೆ ಬಾಟಲು ಒಡೆದು ನಂತರ ಚುಚ್ಚಿ ಗಾಯಗೊಳಿಸಿದ್ದಾರೆ.
ಗಂಗಮ್ಮನಗುಡಿ ಪೊಲೀಸ್ ಠಾಣೆಯ ಎಎಸ್‌ಐ ನಾಗರಾಜು ಗಾಯಗೊಂಡವರು.

ಈ ಘಟನೆಯಲ್ಲಿ ನಾಗರಾಜ್ ಅವರ ಬಲಗೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಬಾಟಲಿಯಿಂದ ಹಲ್ಲೆ ಮಾಡಿದ ಅಬ್ಬಿಗೆರೆ ನಿವಾಸಿ ಅಶ್ವಿನಿ ಎಂಬಾಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದರಿಂದ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಶ್ವಿನಿ ಪತಿಯಿಂದ ಪ್ರತ್ಯೇಕವಾಗಿದ್ದಾರೆ. ಇನ್ನು ಸಹೋದರನ ಜತೆಗೆ ಆಸ್ತಿ ವಿವಾದವಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಅಶ್ವಿನಿ ಕಳೆದ ಹತ್ತು ವರ್ಷಗಳಿಂದ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ತಿ ವಿವಾದದ ಸಂಬಂಧ ದೂರು ನೀಡಲು ಶನಿವಾರ ಬೆಳಗ್ಗೆ ೧೧ರ ವೇಳೆ ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ದೂರು ಆಲಿಸಿದ ಎಎಸ್‌ಐ ನಾಗರಾಜು ಅವರು ಪರಿಶೀಲಿಸುವುದಾಗಿ ಹೇಳಿದ್ದಾರೆ. ಯಾವಾಗಲೂ ಹೀಗೆ ಹೇಳುವಿರಿ. ನನಗೆ ನ್ಯಾಯ ಸಹಾಯ ಮಾಡುತ್ತಿಲ್ಲ ಎಂದು ಕೋಪಗೊಂಡ ಅಶ್ವಿನಿ, ತನ್ನ ಬಳಿ ಇದ್ದ ಗಾಜಿನ ಬಾಟಲಿಯನ್ನು ಒಡೆದು ನಾಗರಾಜು ಅವರ ಬಲಗೈಗೆ ಚುಚ್ಚಿದ್ದಾರೆ. ಅಷ್ಟರಲ್ಲಿ ಠಾಣಾ ಸಿಬ್ಬಂದಿ ಆಕೆಯನ್ನು ಹಿಡಿದುಕೊಂಡಿದ್ದಾರೆ. ಗಾಯಗೊಂಡಿದ ನಾಗರಾಜು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಶ್ವಿನಿ ಬಗ್ಗೆ ವಿಚಾರಿಸಿದಾಗ ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಕೂಡಲೇ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿ ನಿಮ್ಹಾನ್ಸ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net