

ವಾಷಿಂಗ್ಟನ್: ಮಾನವನ ದೇಹದ ಅತಿ ಸೂಕ್ಷ್ಮ ಅಂಗಗಳಲ್ಲಿ ಕಣ್ಣು ಸೇರುತ್ತದೆ. ಐ ಡ್ರಾಪ್ ಹಾಕುವಾಗಲೂ ಅತಿ ಎಚ್ಚರಿಕೆಯಿಂದ ಹಾಕಬೇಕು ಎನ್ನಲಾಗುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಐ ಡ್ರಾಪ್ ಹಾಕಿಕೊಳ್ಳುವ ಬದಲು ನೈಲ್ ಗ್ಲ್ಯೂವನ್ನು ಕಣ್ಣಿಗೆ ಹಾಕಿಕೊಂಡು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
ಅಮೆರಿಕದ ಮಿಚಿಗನ್ ಮೂಲದ ಯಾಕೆಡ್ರಾ ವಿಲಿಯಮ್ಸ್ ಈ ರೀತಿ ಪೇಚಿಗೆ ಸಿಲುಕಿದ ಮಹಿಳೆ. ಆಕೆ ಲೆನ್ಸ್ ಬಳಕೆ ಮಾಡುತ್ತಿದ್ದು, ಏಪ್ರಿಲ್ 15ರ ರಾತ್ರಿ ಲೆನ್ಸ್ ಹಾಕಿಕೊಂಡೇ ಮಲಗಿದ್ದಳಂತೆ. ರಾತ್ರಿ 1 ಗಂಟೆಯ ಹೊತ್ತಿಗೆ ಲೆನ್ಸ್ ತೆಗೆಯಬೇಕೆನಿಸಿ, ಎದ್ದು ಲೆನ್ಸ್ ತೆಗೆಯಲು ಮುಂದಾಗಿದ್ದಾಳೆ. ಪರ್ಸ್ನಲ್ಲಿದ್ದ ಐ ಡ್ರಾಪ್ನ್ನು ತೆಗೆಯಲು ಕೈ ಹಾಕಿದ್ದಾಳೆ. ಆಗ ಆಕೆಗೆ ಐ ಡ್ರಾಪ್ ಬಾಟೆಲ್ ಗಾತ್ರದ್ದೇ ಆಗಿದ್ದ ನೈಲ್ ಗ್ಲ್ಯೂ ಸಿಕ್ಕಿದೆ. ಅದನ್ನು ಕಣ್ಣಿಗೆ ಹಾಕಿಕೊಂಡಿದ್ದಾಳೆ.
ನೈಲ್ ಗ್ಲೂ ಕಣ್ಣಿಗೆ ಬಿದ್ದ ತಕ್ಷಣ ಕಣ್ಣು ನೋವು ಮತ್ತು ತುರಿಕೆ ಶುರುವಾಗಿದೆ. ತಕ್ಷಣ ತಾನು ಮಾಡಿದ ತಪ್ಪೇನೆಂದು ಆಕೆಯ ಅರಿವಿಗೆ ಬಂದಿದೆ. ಕಣ್ಣು ಬಿಡದಂತೆ ರೆಪ್ಪೆಗಳು ಅಂಟಿಕೊಂಡಿವೆ. ಗಂಡನನ್ನು ಕೂಗಿ ಕರೆದು ಆ್ಯಂಬುಲೆನ್ಸ್ಗೆ ಕರೆ ಮಾಡಲು ಹೇಳಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ವೈದ್ಯರು ಸತತ ಎರಡು ಗಂಟೆ ಪ್ರಯತ್ನ ಮಾಡಿ ಆಕೆ ಕಣ್ಣು ತೆರೆಯುವಂತೆ ಮಾಡಿದ್ದಾರೆ. ಕಣ್ಣಿನಲ್ಲಿ ಲೆನ್ಸ್ ಇದ್ದ ಕಾರಣದಿಂದಾಗಿ ಆಕೆಯ ಕಣ್ಣು ಉಳಿದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆಕೆಯ ರೆಪ್ಪೆಯ ಕೂದಲು ಸಂಪೂರ್ಣವಾಗಿ ಉದುರಲಿದೆ ಎಂದೂ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)