ಚಲಿಸುತ್ತಿದ್ದ ಆಟೋದಿಂದ ಜಿಗಿದು ಪಾರಾದ ಮಹಿಳೆ

auto
Published on

ಬೆಂಗಳೂರು: ನಮ್ಮ ಯಾತ್ರಿ ಆ್ಯಪ್‌ನ ಆಟೋ ಚಾಲಕ ಮದ್ಯದ ಅಮಲಿನಲ್ಲಿ ತಪ್ಪಾದ ಜಾಗಕ್ಕೆ ಕರೆದೊಯ್ಯುವಾಗ ಆತಂಕಗೊಂಡ ಮಹಿಳೆ ಮಾರ್ಗ ಮಧ್ಯೆ ಚಲಿಸುತ್ತಿದ್ದ ಆಟೋದಿಂದ ಜಿಗಿದು ಅಪಾಯದಿಂದ ಪಾರಾಗಿದ್ದಾರೆ.

ಗುರುವಾರ ರಾತ್ರಿ ೯ ಗಂಟೆಗೆ ಹೆಬ್ಬಾಳದ ವೀರಣ್ಣಪಾಳ್ಯ ಬಳಿ ಈ ಘಟನೆ ನಡೆದಿದೆ. ಈ ಸಂಬಂಧ ಮಹಿಳೆಯ ಪತಿ ಅಜಾರ್ ಖಾನ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಘಟನೆ ಕುರಿತು ವಿವರಿಸಿದ್ದಾರೆ. ಜತೆಗೆ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನನ್ನ ಪತ್ನಿ ಗುರುವಾರ ರಾತ್ರಿ ಹೊರಮಾವುನಿಂದ ಥಣಿಸಂದ್ರಕ್ಕೆ ನಮ್ಮ ಯಾತ್ರಿ ಆ್ಯಪ್ ಮುಖಾಂತರ ಆಟೋ ಬುಕ್ ಮಾಡಿದ್ದರು. ಆದರೆ, ಪಾನಮತ್ತ ಆಟೋ ಚಾಲಕ ನನ್ನ ಪತ್ನಿ ಪ್ರಯಾಣಿಸುವಾಗ ಸರಿಯಾದ ಲೊಕೇಶನ್‌ಗೆ ಬರುವ ಬದಲು ರಾಂಗ್ ಲೊಕೇಶನ್ ಕಡೆಗೆ ಆಟೋ ಚಲಾಯಿಸಿದ್ದಾನೆ. ಈ ವೇಳೆ ನನ್ನ ಪತ್ನಿ ಆಟೋ ನಿಲ್ಲಿಸುವಂತೆ ಹಲವು ಬಾರಿ ಸೂಚಿಸಿದರೂ ಆತ ಆಟೋ ನಿಲ್ಲಿಸದೆ ತಪ್ಪು ಮಾರ್ಗದಲ್ಲೇ ಆಟೋ ಚಲಾಯಿಸಲು ಮುಂದಾಗಿದ್ದಾನೆ. ಈ ವೇಳೆ ನನ್ನ ಪತ್ನಿ ಚಲಿಸುತ್ತಿದ್ದ ಆಟೋದಿಂದ ಜಿಗಿದು ಅಪಾಯದಿಂದ ಪಾರಾಗಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ನಿಮ್ಮ ಸಂಪರ್ಕ ಸಂಖ್ಯೆ ಹಾಗೂ ಆಟೋ ವಿವರ ನೀಡುವಂತೆ ಅಜಾರ್ ಖಾನ್‌ನನ್ನು ಕೇಳಿದ್ದಾರೆ. ಆಟೋ ಹಾಗೂ ಚಾಲಕನ ಮಾಹಿತಿ ಸಂಗ್ರಹಿಸಿರುವ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಘಟನೆ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ನಗರದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜತೆಗೆ ನಮ್ಮ ಯಾತ್ರೆ ಆ್ಯಪ್ ಬಗ್ಗೆಯೂ ಕಿಡಿಕಾರಿದ್ದಾರೆ. ಆ ಪಾನಮತ್ತ ಆಟೋ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಲವು ನೆಟ್ಟಿಗರು ಎಕ್ಸ್ ಖಾತೆಯಲ್ಲಿ ನಗರ ಪೊಲೀಸರನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net