

ಸಿದ್ದಾಪುರ : ಪಟ್ಟಣದ ಬಸ್ ನಿಲ್ದಾಣದ ತಂಗುದಾಣದ ಹಿಂಭಾಗದಲ್ಲಿ ದೊಡ್ಡ ಗಾತ್ರದ ಮರವೊಂದು ಒಣಗಿ ನಿಂತಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ಸಂಭವಿಸುವ ಮುನ್ನ ತೆರವುಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಮರ ತೆರವು ಮಾಡುವಂತೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಹಿಂದೆ ಸೂಚನೆ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರಿದ್ದಾರೆ. ಗಾಳಿ, ಮಳೆಗೆ ಕೊಂಬೆಗಳು ಉದುರಿ ಬೀಳುತ್ತಿವೆ. ಅಂಚೆ ಕಚೇರಿ ಮತ್ತು ಹಳೇ ಪೊಲೀಸ್ ಠಾಣೆಯ ಆವರಣದಲ್ಲೂ ಒಣಗಿದ ಮೂರು ಮರಗಳು ಯಾವುದೇ ಸಮಯದಲ್ಲಾದರೂ ಧರೆಗೆ ಉರುಳಿ ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ.
ಈ ಮರದ ಕೆಳಗೆಯೇ ಬಸ್ ತಂಗುದಾಣವಿದ್ದು ಪ್ರತಿನಿತ್ಯ ನೂರಾರು ಪ್ರಯಾಣಿಕರು ಬಸ್‌ಗಾಗಿ ಕಾದು ನಿಲ್ಲುತ್ತಾರೆ. ಅಲ್ಲದೆ ಪಕ್ಕದಲ್ಲೆ ಬೀದಿ ಬದಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟವರು ಒಣಗಿದ ಮರವನ್ನು ಮರ ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.