

ಸೋಮವಾರಪೇಟೆ : ಕಾಜೂರು ಗ್ರಾಮದಲ್ಲಿ ಕಾಡುದನ ಉರುಳಿಗೆ ಸಿಲುಕಿ ಹಲವು ದಿನಗಳ ಕಾಲ ನರಳಾಡಿ ರಸ್ತೆ ಬದಿಯಲ್ಲಿ ಪ್ರಾಣ ಬಿಟ್ಟಿದೆ.
ಕಾಜೂರು ಮೀಸಲು ಅರಣ್ಯದಲ್ಲಿ ವಾಸವಿರುವ ಕಾಡುದನಗಳು ಕೃಷಿ ಭೂಮಿಗೆ ನುಗ್ಗಿ ಫಸಲು ನಷ್ಟ ಮಾಡುತ್ತಿರುವ ಬಗ್ಗೆ ರೈತರು ಪಂಚಾಯಿತಿಗೆ ದೂರು ನೀಡಿದ್ದರು. ಆದರೆ ಪಂಚಾಯಿತಿ ಅಧಿಕಾರಿಗಳು ಕಾಡುದನಗಳನ್ನು ಹಿಡಿಯಲು ಅನುಮತಿ ಇಲ್ಲ ಎಂದಿದ್ದರು. ಸುಮಾರು 200ಕ್ಕೂ ಹೆಚ್ಚು ದನಗಳು ಮೀಸಲು ಅರಣ್ಯದೊಳಗಿವೆ ಎಂದು ಅಂದಾಜಿಸಲಾಗಿದೆ. ಅಲ್ಲಿಯೇ ಅವುಗಳ ಸಂತತಿ ಬೆಳೆಯುತ್ತಿದೆ. ರಾತ್ರಿಯಾಗುತ್ತಿದ್ದಂತೆ ಯಡವಾರೆ, ಸಜ್ಜಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಆಹಾರಕ್ಕಾಗಿ ಬರುತ್ತಿವೆ. ಈ ವೇಳೆ ಉರುಳಿಗೆ ಸಿಲುಕಿ ಕಾಡುಗೂಳಿ ಪ್ರಾಣ ಬಿಟ್ಟಿದೆ. ಕಳೇಬರ ವಿಲೇವಾರಿ ಮಾಡದ ಹಿನ್ನೆಲೆ ದುರ್ನಾತ ಬೀರುತ್ತಿತ್ತು. ರಸ್ತೆಯಲ್ಲಿ ತಿರುಗಾಡಲು ಸಾಧ್ಯವಿಲ್ಲದಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಯಾರೋ ಹಾಕಿದ ಉರುಳು ಗೂಳಿಯ ಕೊರಳಿಗೆ ಸಿಲುಕಿ, ಉಸಿರಾಡಲು ಪರದಾಡುವಂತಹ ಪರಿಸ್ಥಿತಿ ಉಂಟಾಗಿತ್ತು. ಸ್ಥಳೀಯ ಐಗೂರು ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಸೇರಿದಂತೆ ಎಲ್ಲರಿಗೂ ಮಾಹಿತಿ ನೀಡಿದರೂ, ಅದನ್ನು ಉಳಿಸಲು ಯಾರೂ ಕೈಜೋಡಿಸಲಿಲ್ಲ. ಪಶುವೈದ್ಯಕೀಯ ಇಲಾಖೆಯವರು ಮೊಬೈಲ್ ಕರೆ ಸ್ವೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅದು ಇರುವ ಸ್ಥಳಕ್ಕೆ ನೀರನ್ನು ತೆಗೆದುಕೊಂಡು ಹೋಗಿ ಕುಡಿಸಲಾಗುತ್ತಿತ್ತು. ಅದರ ಕುತ್ತಿಗೆಯಲ್ಲಿ ಹಗ್ಗದ ಬಿಗಿತದಿಂದ ಗಾಯವಾಗಿರುವುರಿಂದ ಆಹಾರವನ್ನು ಸೇವಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಮುರ‌್ನಾಲ್ಕು ದಿನದ ಹಿಂದೆ ಮೃತಪಟ್ಟಿದೆ ಎಂದು ಸಾಮಾಜಿಕ ಹೋರಾಟಗಾರ ಕೆ.ಪಿ. ದಿನೇಶ್ ಹೇಳಿದರು.