

ಸುಭಾಸ ಧೂಪದಹೊಂಡ ಕಾರವಾರ
ಅವರು ಅಕ್ಷರವನ್ನೇ ಕಲಿತವರಲ್ಲ. ಆದರೆ, ವಿಶ್ವವಿದ್ಯಾಲಯಗಳ ಪುಸ್ತಕಗಳಿಗೆ ಪಠ್ಯವಾದರು! ಅವರು ಪುಸ್ತಕ ಓದಿ ಪದವಿ ಪಡೆದವರಲ್ಲ. ಅವರ ಜೀವನವೇ ಪುಸ್ತಕವಾಯಿತು! ಅಂಥ ಅಪರೂಪದ ರತ್ನ, ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಸುಕ್ರಿ ಬೊಮ್ಮಗೌಡ.
ಬುಡಕಟ್ಟು ಹಾಲಕ್ಕಿ ಸಮುದಾಯದ ಸುಕ್ರಿ, ತಮ್ಮ ಪಾರಂಪರಿಕ ಜ್ಞಾನದ ಮೂಲಕ ಜಾನಪದ ಅಧ್ಯಯನ ನಡೆಸುವವರಿಗೆ ಒಂದು ವಿಶ್ವಕೋಶವೇ ಆಗಿದ್ದರು. ಜಾಗೃತಿ ಹೋರಾಟಗಳ ಮೂಲಕ ಸಮುದಾಯಕ್ಕೆ ದಾರಿದೀಪವಾಗಿದ್ದರು. ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಗೆ ಭಾಜನರಾಗಿದ್ದರು.
1942ರಲ್ಲಿ ಅಂಕೋಲಾದ ಶಿರಕುಳಿ ಗ್ರಾಮದಲ್ಲಿ ದೇವಿ ಮತ್ತು ಸುಬ್ಬ ದಂಪತಿಯ ನಾಲ್ಕನೇ ಪುತ್ರಿಯಾಗಿ ಜನಿಸಿದವರು ಸುಕ್ರಿ ಗೌಡ. ಅವರ ತಾಯಿ ಹಾಗೂ ಅಕ್ಕ ಹಾಲಕ್ಕಿ ಜಾನಪದ ಗಾಯಕಿಯರಾಗಿದ್ದರು. ತಂದೆ ಸಾಂಪ್ರದಾಯಿಕ ಗುಮಟೆಪಾಂಗ್ ವಾದ್ಯ ನುಡಿಸುತ್ತಿದ್ದರಲ್ಲದೆ ಸುಗ್ಗಿ ಕುಣಿತದಲ್ಲಿ ಪರಿಣತರಾಗಿದ್ದರು. ಅವರಿಂದಲೇ ಸುಕ್ರಿ ತಮ್ಮ ಸಮುದಾಯದ ಹಾಡು, ಸುಗ್ಗಿ, ಪುಗುಡಿ, ತಾರ್ಲೆ ಕುಣಿತ ಕಲಿತರು. ಕೃಷಿ, ಪಾರಂಪರಿಕ ಔಷಧ ಜ್ಞಾನ ಪಡೆದುಕೊಂಡರು. ಮೂಲವ್ಯಾಧಿ, ಬಂಜೆತನ ಹಾಗೂ ಹಳದಿ ಕಾಮಾಲೆಗೆ ಅವರು ನಾಟಿ ಔಷಧ ನೀಡುತ್ತಿದ್ದರು. ಕಾಡಿನ ನೂರಾರು ಮರಗಳ ಹೆಸರುಗಳನ್ನು ಹೇಳಬಲ್ಲವರಾಗಿದ್ದರು.
ತಾರ್ಲೆ ಕುಣಿತ: ಬಾಲ್ಯದಲ್ಲಿ ಕಲಿತ ಹಾಲಕ್ಕಿ ಸಮುದಾಯದ ತಾರ್ಲೆ ಕುಣಿತ ಹಾಗೂ ಅದರ ಹಾಡುಗಳಿಗೆ ಸುಕ್ರಿ ಹೆಸರಾಗಿದ್ದರು. ನಂತರ ಅವರು ಬಡಗೇರಿಯ ಸಣ್ಣು, ಲಿಂಗಾ, ನಾಗಮ್ಮಾ ಮುಂತಾದವರನ್ನು ಸೇರಿಸಿಕೊಂಡು ತಾರ್ಲೆ ಕುಣಿತದ ತಂಡ ಕಟ್ಟಿಕೊಂಡರು. ಆಗ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿದ್ದ ಅಂಕೋಲಾದ ಗೋವಿಂದ ಮಹಾಲೆ ಈ ತಂಡದ ವಿಶೇಷ ಅರಿತು ವಿವಿಧೆಡೆ ಕಾರ್ಯಕ್ರಮ ಕೊಡಿಸಿದರು. ಮುಂದೆ ಇವರ ತಂಡ ಚೆನ್ನೈ, ದೆಹಲಿ ಸೇರಿ ದೇಶದ ವಿವಿಧ ಭಾಗಗಳಲ್ಲಿ ನೂರಾರು ಕಾರ್ಯಕ್ರಮ ನೀಡಿತು.
ಜಾನಪದ ಕಣಜ: ಸುಕ್ರಿ ಸ್ಥಳದಲ್ಲೇ ಹಾಡು ಕಟ್ಟಿ ಹಾಡಬಲ್ಲವರಾಗಿದ್ದರು. ಹಾಲಕ್ಕಿಗಳ ಪರಂಪರೆಯಿಂದ ಹರಿದುಬಂದ ರಾಮಾಯಣ, ಮಹಾಭಾರತ, ಕತೆಗಳನ್ನೂ ಅವರು ಹಾಡಬಲ್ಲವರಾಗಿದ್ದರು. ಅವರ ಮಹಾಭಾರತ ಕತೆಯಲ್ಲಿ ಕೌರವ, ಪಾಂಡವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಾಗಿದ್ದರು ಎಂದು ಸುಕ್ರಿ ಅವರ ಬಗ್ಗೆ ಅಧ್ಯಯನ ನಡೆಸಿದ ಜಾನಪದ ತಜ್ಞೆ ಶಾಂತಿ ನಾಯಕ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ಸುಮಾರು 5 ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳು ಅವರಿಗೆ ಕಂಠಸ್ಥವಾಗಿದ್ದವು. ಅವರ ಜ್ಞಾನವನ್ನು ಅರಿತ ಡಾ. ಹಿ.ಚಿ. ಬೋರಲಿಂಗಯ್ಯ ಧಾರವಾಡ ಆಕಾಶವಾಣಿಗೆ ಹೇಳಿ ಅವರ ಹಾಡುಗಳನ್ನು ರೆಕಾರ್ಡ್ ಮಾಡಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳ ಜನಪದ ಕಲಾ ತರಬೇತಿ ಯೋಜನೆಯ ಅಂಗವಾಗಿ ಸುಕ್ರಿ ಅನೇಕ ಬಾರಿ ಧಾರವಾಡದಲ್ಲಿ ಒಂದೆರಡು ವಾರ ಉಳಿದು ವಿದ್ಯಾರ್ಥಿಗಳಿಗೆ ಸುಗ್ಗಿ ಕುಣಿತ ಮತ್ತು ಗುಮಟೆ ಕಲಾ ತರಬೇತಿ ನೀಡಿದ್ದರು.
ಕೊನೆಗೂ ಈಡೇರದ ಬಯಕೆ: ಸುಕ್ರಿ ಬೊಮ್ಮಗೌಡ ಅವರು ಉತ್ತರ ಕನ್ನಡದ ಹಾಲಕ್ಕಿ ಒಕ್ಕಲು ಸಮುದಾಯಕ್ಕೆ ಸೇರಿದವರು. ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ತಾಲೂಕುಗಳ ಪಶ್ಚಿಮ ಘಟ್ಟದ ತಪ್ಪಲು ಹಾಗೂ ಕರಾವಳಿಯಲ್ಲಿ ಮಾತ್ರ ಇರುವ ಹಾಲಕ್ಕಿಗಳು ಬುಡಕಟ್ಟು ಸಂಸ್ಕೃತಿ ಹೊಂದಿದ್ದಾರೆ. ರವಿಕೆ ಯಿಲ್ಲದೇ ಬೆನ್ನು ಕಾಣುವಂತೆ ಹಸಿರು ಪಟ್ಟೆ ಸೀರೆ ಉಡುವುದು. ಕುತ್ತಿಗೆ ತುಂಬ ಕರಿಮಣಿ ಸರವನ್ನು ಹಾಕಿಕೊಳ್ಳುವುದು ಹಾಲಕ್ಕಿ ಮಹಿಳೆಯರ ವಿಶಿಷ್ಟ ವಸ್ತ್ರ ಶೈಲಿ. ಕಾಡಿನಿಂದ ಕಟ್ಟಿಗೆ ತರುವುದು; ತರಕಾರಿ, ಭತ್ತ ಮುಂತಾದ ಕೃಷಿ ಅವರ ಜೀವನೋಪಾಯ. ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಈಡೇರಿಕೆಗಾಗಿ ಸುಕ್ರಿ ಗೌಡ ಸ್ವತಃ ಎರಡು ಬಾರಿ ದೆಹಲಿಗೆ ತೆರಳಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ‘ನಾನು ಸಾಯೋದ್ರೊಳಗೆ ಹಾಲಕ್ಕಿಗಳನ್ನು ಎಸ್ಟಿಗೆ ಸೇರಿಸಿ’ ಎಂದಿದ್ದರು. ಆದರೆ, ಕೊನೆಗೂ ಅವರ ಬೇಡಿಕೆ ಈಡೇರಲೇ ಇಲ್ಲ.
ಹೋರಾಟದ ಬದುಕು: ಸುಕ್ರಿ ಬೊಮ್ಮಗೌಡ ಬದುಕೇ ಕಾದಂಬರಿಯಂತಿದೆ. 14ನೇ ವಯಸ್ಸಿನಲ್ಲಿ ಬಡಗೇರಿಯ 42 ವರ್ಷದ ಬೊಮ್ಮಗೌಡ ಅವರ ಜತೆ ಸುಕ್ರಿಯ ಬಾಲ್ಯವಿವಾಹ ಆಗಿತ್ತು. ಗಟ್ಟಿ ಪ್ರಾಯ ಬರುವ ಹೊತ್ತಿಗೆ ಸುಕ್ರಿ ಪತಿಯನ್ನು ಕಳೆದುಕೊಂಡಿದ್ದರು. ಒಬ್ಬ ಸಾಕು ಮಗ ಸಾರಾಯಿ ಕುಡಿತಕ್ಕೆ ಬಲಿಯಾಗಿದ್ದ. ಆದರೆ, ಜೀವನದ ಕಷ್ಟಗಳಿಗೆ ಅವರೆಂದೂ ಸೋಲಲಿಲ್ಲ. ಸಾರಾಯಿ ವಿರೋಧಿ ಹೋರಾಟಕ್ಕೆ ಧುಮುಕಿದ್ದರು. 1990ರಲ್ಲಿ ಉತ್ತರ ಕನ್ನಡದಲ್ಲಿ ಡಾ. ಕುಸುಮಾ ಸೊರಬ ಅವರ ನೇತೃತ್ವದಲ್ಲಿ ಸಾರಾಯಿ ವಿರೋಧಿ ಹೋರಾಟ ಜೋರಾಗಿತ್ತು. ಸುಕ್ರಿ ಗೌಡ ನೇತೃತ್ವದ ತಂಡ ಅಂಕೋಲಾ ತಹಸೀಲ್ದಾರ್ ಕಚೇರಿಯ ಎದುರು ಧರಣಿ ಕುಳಿತಿತ್ತು. ನಂತರ ಕುಮಟಾ, ಶಿರಸಿ, ಸಿದ್ದಾಪುರ ಹೀಗೆ ಎಲ್ಲೆಡೆ ತೆರಳಿ ತಮ್ಮ ಹಾಡಿನಿಂದ ಜಾಗೃತಿ ಮೂಡಿಸಿತು. ಬೆಳಗಾವಿಗೆ ತೆರಳಿ ವಿಭಾಗೀಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಇದು ಮಾತ್ರವಲ್ಲ, ಹಲವು ಹೋರಾಟಗಳ ಭಾಗವಾದರು. ಉತ್ತರ ಕನ್ನಡ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ನಡೆಸಿದ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ತೀರ ಇತ್ತೀಚೆಗೆ ಹಾರವಾಡ ರೈಲ್ವೆ ನಿಲ್ದಾಣದಲ್ಲಿ ರೈಲುಗಳ ನಿಲುಗಡೆಗೆ ಆಗ್ರಹಿಸಿ ನಡೆದ ಹೋರಾಟದಲ್ಲೂ ಸುಕ್ರಜ್ಜಿ ಪಾಲ್ಗೊಂಡಿದ್ದರು.
ಪ್ರೀತಿಯ ಸುಕ್ರಜ್ಜಿ: ತಮ್ಮನ್ನು ಮಾತನಾಡಿಸಲು ಬರುವ ಪ್ರತಿಯೊಬ್ಬರನ್ನೂ ಗಲ್ಲ ಹಿಡಿದು, ಪ್ರೀತಿಯಿಂದ ಮೈದಡವಿ ಮಾತನಾಡಿಸುತ್ತಿದ್ದರು. ‘ಮಗಾ’ ಎಂದು ಕರೆದು, ಮುಗ್ಧ ಭಾಷೆಯಲ್ಲಿ ಅದೂ ಇದು ವಿಷಯ ಹೇಳಿ ನಗಿಸುವುದು ಅವರ ವಿಶೇಷವಾಗಿತ್ತು. ಹೆಚ್ಚು ಜನ ಅವರನ್ನು ಸುಕ್ರಿ ಗೌಡ ಎನ್ನುವುದಕ್ಕಿಂತ ಸುಕ್ರಜ್ಜಿ ಎಂದು ಕರೆಯುತ್ತಿದ್ದರು.
ಶ್ರಮ ಜೀವನ: ದೇಶದ ಹಲವು ರಾಜ್ಯಗಳನ್ನು ಸುತ್ತಿ ನೂರಾರು ಕಾರ್ಯಕ್ರಮ ನೀಡಿ, ಸನ್ಮಾನ ಸ್ವೀಕರಿಸಿ ಬಂದರೂ ಸುಕ್ರಿ ಅವರಿಗೆ ಒಂದು ಸ್ವಂತ ಸೂರಿರಲಿಲ್ಲ. 2010ರಲ್ಲಿ ಆಗಿನ ಸಚಿವ ಆರ್.ವಿ. ದೇಶಪಾಂಡೆ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೆರವಿನಿಂದ ಸುಕ್ರಜ್ಜಿಯ ಸ್ವಂತ ಸೂರಿನ ಕನಸು ನನಸಾಗಿತ್ತು. ಕೃಷಿ ಹಾಗೂ ಕಟ್ಟಿಗೆ ತಂದು ಮಾರುವುದು ಅವರ ಕುಟುಂಬದ ಜೀವನಾಧಾರ. ಸುಕ್ರಜ್ಜಿ 70 ದಾಟಿದ ನಂತರವೂ ಕಾಡಿಗೆ ಹೋಗಿ ಕಟ್ಟಿಗೆ ತರುವುದನ್ನು ಬಿಟ್ಟಿರಲಿಲ್ಲ.
ಅಕ್ಷರ ಜಾಗೃತಿ: ಸುಕ್ರಿ ಗೌಡ ಶಾಲೆಗೆ ಹೋದವರಲ್ಲ. 1992ರಲ್ಲಿ ಸಾಕ್ಷರತಾ ಆಂದೋಲನ ಪ್ರಾರಂಭವಾದಾಗ ರಾತ್ರಿ ಶಾಲೆಗೆ ಸೇರಿ ಕೊಂಡಿದ್ದರು. ಅಕ್ಷರ ಕಲಿತರು. ಇತರರೂ ಕಲಿ ಯಿರಿ ಎಂದು ತಮ್ಮ ಹಾಡುಗಳ ಮೂಲಕ ಜಾಗೃತಿ ಮೂಡಿಸಿದ್ದರು.
ಸುಕ್ರಜ್ಜಿಗೆ ಒಲಿದ ಪ್ರಶಸ್ತಿಗಳು
ಖ್ಯಾತ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ ಆಗಿರುವ ನಷ್ಟ ತುಂಬಲು ಸಾಧ್ಯವಿಲ್ಲ. ಹಾಲಕ್ಕಿ ಜಾನಪದ ಹಾಡುಗಳ ಮೂಲಕವೇ ‘ಸುಕ್ರಜ್ಜಿ’ ಲೋಕಪ್ರಸಿದ್ಧರಾಗಿದ್ದರು. ಜತೆಯಲ್ಲಿ ಮದ್ಯಪಾನ ವಿರೋಧಿ ಆಂದೋಲನ ದಲ್ಲಿಯೂ ಸಕ್ರಿಯರಾಗಿದ್ದ ಸುಕ್ರಿ ಅವರ ಬದುಕು ಮತ್ತು ಸಾಧನೆ ಆದರ್ಶಪ್ರಾಯವಾದುದು. ಸುಕ್ರಿ ಬೊಮ್ಮಗೌಡ ಅವರನ್ನು ಕಳೆದುಕೊಂಡಿರುವ ನಾಡಿದ ದುಃಖದಲ್ಲಿ ನಾನೂ ಪಾಲ್ಗೊಂಡಿದ್ದೇನೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ