ಹರ್ಷನ ಮೊಬೈಲ್ ಯಾರ ಬಳಿ ಇದೆ? ಗೃಹ ಸಚಿವರು ಮೊಬೈಲ್ ಸಿಕ್ಕಿದೆ ಅಂತಾರೆ... ಎಸ್ಪಿ ಸಿಕ್ಕಿಲ್ಲಾ ಅಂತಾರೆ!

shimoga harsha 3
Published on

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷನ ಸಾವಿಗೂ ಮುನ್ನ ಹುಡುಗಿಯರಿಬ್ಬರು ಸಹಾಯ ಕೋರಿ ಕರೆ ಮಾಡಿದ್ದರು. ಹರ್ಷನ ಹತ್ಯೆಗೆ ಹುಡುಗಿಯರಿಬ್ಬರನ್ನ ಬಳಸಿ ದುಷ್ಕರ್ಮಿಗಳು ಹೊಂಚು ಹಾಕಿದ್ದರು. ಹರ್ಷನನ್ನು ಕೊಂದವರೇ ಮೊಬೈಲ್ ಎತ್ತಿಕೊಂಡು ಹೋಗಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಭಾರಿ ಚರ್ಚೆಗೆ ಗ್ರಾಸ ಮಾಡಿತ್ತು. ಇದೀಗ ರೆ ಹರ್ಷನ ಹತ್ಯೆ ಪ್ರಕರಣದಲ್ಲಿ ಗೃಹ ಸಚಿವರೂ ಸೇರಿದಂತೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿರುವುದು ಮತ್ತಷ್ಟು ಅನುಮಾನ ಮೂಡಿಸಿದೆ.

ಹರ್ಷನ ಮೊಬೈಲ್ ಸಿಕ್ಕಿದೆ, ಹತ್ಯೆಗೆ ಮುನ್ನ ಯಾರೆಲ್ಲಾ ಹರ್ಷನೊಂದಿಗೆ ಮಾತನಾಡಿದ್ದಾರೆ ಎಂಬ ಬಗ್ಗೆ ತನಿಖಾ ತಂಡ ತಲಾಶ್ ಮಾಡುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರಕರ್ತರಿಗೆ ತಿಳಿಸಿದ್ದರು. ಆದರೆ ಮೊಬೈಲ್ ಇನ್ನೂ ಸಿಕ್ಕಿಲ್ಲ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಶುಕ್ರವಾರ ಹೇಳಿದ್ದಾರೆ. ಇವರಿಬ್ಬರಲ್ಲಿ ಯಾರ ಮಾತು ಅಧಿಕೃತ ಎಂಬ ಪ್ರಶ್ನೆ ಎದುರಾಗಿದೆ.

ಹತ್ಯೆ ಪ್ರಕರಣದ ಆರಂಭದಿಂದಲೂ ಇಂತಹ ಗೊಂದಲಗಳು ನಡೆದೇ ಇವೆ. ಹತ್ಯೆಯಾದ ಎರಡನೇ ದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ ಬಂಧಿತರ ಅಂಕಿ-ಅಂಶ ತಾಳೆಯಾಗುತ್ತಿರಲಿಲ್ಲ. ಗೃಹ ಸಚಿವರು ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದರೆ ಪೊಲೀಸ್ ಅಧಿಕಾರಿಗಳಲ್ಲಿ ಕೆಲವರು ಇಬ್ಬರನ್ನು ಬಂಧಿಸಲಾಗಿದೆ ಎಂದರು. ಇನ್ನು ಕೆಲವರು ಮೂವರನ್ನು ಬಂಧಿಸಲಾಗಿದೆ ಎಂದಿದ್ದರು.

ಹತ್ಯೆಗೂ ಮುನ್ನ ಮಹಿಳೆಯರು ಹರ್ಷನಿಗೆ ವಿಡಿಯೋ ಕಾಲ್ ಮಾಡಿ ಕರೆಸಿಕೊಂಡ ಮಾಹಿತಿ ಲಭ್ಯವಾಗಿದೆ ಎಂಬ ಸುದ್ದಿಯನ್ನೂ ಹರಿಯಬಿಡಲಾಯಿತು. ಮರುದಿನವೇ ಕರೆ ಮಾಡಿದ ಮಹಿಳೆಗೂ ಹತ್ಯೆಗೂ ಸಂಬಂಧ ಇಲ್ಲ. ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ಹುಡುಗಿ ಸ್ನೇಹಿತೆಯಿಂದ ಹರ್ಷನ ನಂಬರ್ ಪಡೆದು ಕರೆ ಮಾಡಿದ್ದರು ಎಂದೂ ಹೇಳಲಾಯಿತು. ಆರಂಭದಿಂದಲೂ ಈ ರೀತಿಯ ಗೊಂದಲಗಳು ಪೊಲೀಸ್ ಇಲಾಖೆಯಿಂದಲೇ ಸೃಷ್ಟಿಯಾಗುತ್ತಿವೆ. ಯಾವುದೇ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ತನಿಖೆಯ ಮಹತ್ವದ ಅಂಶಗಳನ್ನು ತನಿಖಾ ತಂಡ ಬಹಿರಂಗಪಡಿಸುವುದಿಲ್ಲ ಎಂಬುದು ಗೊತ್ತು. ಆದರೆ, ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿರುವುದು ಏಕೆ ಎಂದು ಜನರಲ್ಲಿ ಪ್ರಶ್ನೆ ಹುಟ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net