ಸ್ವಾಗತಾರ್ಹ ಹೆಜ್ಜೆ; ನ್ಯಾಯಾಂಗದಲ್ಲೂ ಕನ್ನಡ ಬಳಕೆ ಹೆಚ್ಚಲಿ

Karnataka HC
Published on

ಹೈಕೋರ್ಟ್ ನ್ಯಾಯಾಧೀಶರಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ಚಂದ್ರಶೇಖರ ಎಂ. ಜೋಶಿ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗುರುವಾರ ಕನ್ನಡದಲ್ಲೇ ತೀರ್ಪು ನೀಡಿರುವುದು ಶ್ಲಾಘನೀಯವಾಗಿದೆ. ಇಂಥದೊಂದು ಐತಿಹಾಸಿಕ ಕ್ಷಣಕ್ಕೆ ಕನ್ನಡಿಗರು ಬಹು ವರ್ಷಗಳಿಂದ ಕಾದಿದ್ದರು. ಈ ಹಿಂದೆ ನ್ಯಾ. ನಾಗರಾಜ ಅರಳಿ ಕನ್ನಡದಲ್ಲೇ ತೀರ್ಪು ನೀಡಿದ್ದರೂ ಅದು ಇಂಗ್ಲಿಷ್ ತೀರ್ಪಿನ ತರ್ಜುಮೆಯಾಗಿತ್ತು. ಇದೀಗ ಪೂರ್ಣ ಪ್ರಮಾಣದಲ್ಲಿ ಕನ್ನಡದಲ್ಲೇ ತೀರ್ಪು ಬಂದಿರುವುದು ಕನ್ನಡಿಗರೆಲ್ಲರಿಗೂ ಸಂತಸ ತರುವ ಸಂಗತಿಯಾಗಿದೆ. ಇದನ್ನು ಇತರ ನ್ಯಾಯಾಧೀಶರೂ ಅನುಸರಿಸಿದರೆ ಇಂಗ್ಲಿಷ್ ತಿಳಿಯದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಇದಲ್ಲದೆ, ಸಾಧ್ಯವಾದಷ್ಟೂ ಕರ್ನಾಟಕದಲ್ಲಿರುವ ಎಲ್ಲ ನ್ಯಾಯಾಲಯಗಳ ಕಲಾಪಗಳನ್ನೂ ಕನ್ನಡದಲ್ಲೇ ನಡೆಸುವಂತಾಗಬೇಕು. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಮತ್ತು ನ್ಯಾಯದಾನದ ಪ್ರಕ್ರಿಯೆಯನ್ನು ಅವರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ‘ಸಂವಿಧಾನದ 348ನೇ ವಿಧಿ ಪ್ರಕಾರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್​ನ ಭಾಷೆ ಇಂಗ್ಲಿಷ್ ಮಾತ್ರ ಎಂದು ಹೇಳಿಲ್ಲ. 348(1)ನೇ ವಿಧಿಯಡಿ ಸರ್ಕಾರವು ರಾಷ್ಟ್ರಪತಿಗಳಿಂದ ಅನುಮತಿ ಪಡೆದು ರಾಜ್ಯಪಾಲರ ಮೂಲಕ ಕಾನೂನು ಮಾಡಬಹುದು ಎಂದು ಹೇಳಿದೆ. ಆದರೆ, ಸಂಬಂಧ ಪಟ್ಟವರು ಅದರ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಅವರಾರೂ ನಿರ್ಧಾರ ಕೈಗೊಂಡಿಲ್ಲ. ನಾವು ಕಾಯಲಾಗದು. ಕನ್ನಡದಲ್ಲಿ ತೀರ್ಪು ಬರುವುದು ಆರಂಭವಾ ಗಬೇಕು. ಅದಕ್ಕಾಗಿಯೇ ನಾವು ಆರಂಭಿಸಿದ್ದೇವೆ’ ಎಂದು ನ್ಯಾ. ದೀಕ್ಷಿತ್ ಹೇಳುವ ಮೂಲಕ, ಕನ್ನಡ ಬಳಕೆಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಮತ್ತು ನ್ಯಾಯಪೀಠದ ಈ ತೀರ್ಪು ಇತರ ನ್ಯಾಯಮೂರ್ತಿಗಳಿಗೆ ಉತ್ತಮ ಸಂದೇಶ ರವಾನಿಸಿದೆ.

ಕನ್ನಡವು ಎಲ್ಲ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ತಂತ್ರಜ್ಞಾನದಲ್ಲೂ ಯಶಸ್ವಿಯಾಗಿ ಅನುಷ್ಠಾನಿಸಲಾಗಿದ್ದು, ಮೊಬೈಲ್ ಫೋನ್​ಗಳಲ್ಲಿ ಕನ್ನಡ ಕೀಲಿಮಣೆ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಆಪ್​ಗಳಲ್ಲಿ ಸಹ ಕನ್ನಡದ ಬಳಕೆ ಸುಲಭಸಾಧ್ಯವಾಗಿದೆ. ಅಂದರೆ, ಪ್ರಬಲವಾದ ಇಚ್ಛಾಶಕ್ತಿಯೊಂದಿಗೆ ಭಾಷೆಯನ್ನು ಬಳಸಲು ಆರಂಭಿಸಿದರೆ, ಅದರ ಬೆಳವಣಿಗೆ ಖಂಡಿತ ಸಾಧ್ಯ ಎಂಬುದಕ್ಕೆ ಈ ನಿದರ್ಶನಗಳು ಸಾಕ್ಷಿ. ನ್ಯಾಯಾಲಯದ ಕಲಾಪಗಳಲ್ಲಿ ಕನ್ನಡ ಬಳಕೆಯಾಗಬೇಕು, ತೀರ್ಪು ಕನ್ನಡದಲ್ಲೇ ನೀಡಬೇಕು ಎಂಬ ಬೇಡಿಕೆ ಹಳೆಯದ್ದು. ಆದರೆ, ಅದಕ್ಕೀಗ ಸ್ಪಂದನೆಯ ರೂಪ ಸಿಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಆದರೆ, ಇದು ಕೇವಲ ಒಂದೆರಡು ಪ್ರಕರಣ ಅಥವಾ ತೀರ್ಪಗಳಿಗೆ ಸೀಮಿತವಾಗಬಾರದು ಎಂಬ ಆಶಯ ಕನ್ನಡಿಗರದ್ದು. ‘ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು’ ಎಂದು ನ್ಯಾ. ದೀಕ್ಷಿತರ ಆಶಯ ಸ್ವಾಗತಾರ್ಹ. ಇಷ್ಟೆಲ್ಲ ಜಾಗೃತಿ ಮತ್ತು ಅರಿವಿನ ಅಬ್ಬರದ ಮಧ್ಯೆಯೂ, ಕೆಲವರು ಕನ್ನಡದ ಬಳಕೆಯ ಬಗ್ಗೆ ಕೀಳರಿಮೆ ಹೊಂದಿರುವುದು ದುರದೃಷ್ಟಕರ. ಇಲ್ಲಿಯ ಜನರ ಭಾವನೆಗಳನ್ನು ಅರಿಯಲು, ಸ್ಪಂದಿಸಲು ರಾಜ್ಯಭಾಷೆಯಾದ ಕನ್ನಡವೇ ಹೆಚ್ಚು ಸಮರ್ಥ. ಹಾಗಾಗಿ, ಕನ್ನಡಕ್ಕೆ ಆತಂಕವಿದೆ ಎಂದು ಹಳಹಳಿಸುವ ಬದಲು ನ್ಯಾಯಾಂಗ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತಾದರೆ ಕನ್ನಡದ ನಾಳೆಗಳು ನಿರಾಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net