

ರೂರ್ಕೆಲಾ(ಒಡಿಶಾ): ಲಾಕ್ಡೌನ್ ನಡುವೆಯೂ ನೆರವೇರಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಅವರ ವಿವಾಹದ ಬಗ್ಗೆ ಪರ-ವಿರೋಧದ ಚರ್ಚೆಯಾಗುತ್ತಿರುವ ನಡುವೆಯೇ ಒಡಿಶಾದ ಸುಂದರ್ಗಢದ ನವಜೋಡಿಯೊಂದು ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದೇ, ಸಾಮಾಜಿಕ ಅಂತರಕ್ಕೆ ಒತ್ತು ನೀಡುವ ಮೂಲಕ ಸರಳ ಮದುವೆಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಕುಟುಂಬದ ಕೆಲವೇ ಸದಸ್ಯರ ಸಮ್ಮುಖದಲ್ಲಿ ಶುಕ್ರವಾರ ಸುಂದರ್ಗಢದ ಝಾರ್ಗೋನ್ ಗ್ರಾಮದಲ್ಲಿ ಅಮೃತ್ ಪಟೇಲ್ ಮತ್ತು ಸುಭಶ್ರೀ ಪಟೇಲ್ ಜೋಡಿ ಸರಳ ವಿವಾಹವಾದರು.
ವಿವಾಹ ಸಂದರ್ಭದಲ್ಲಿ ಕರೊನಾ ಲಾಕ್ಡೌನ್ ಮಾರ್ಗಸೂಚಿಗಳನ್ನು ಬಿಟ್ಟುಕೊಡದ ವಧು-ವರರ ಕುಟುಂಬ ಸಾಮಾಜಿಕ ಅಂತರವನ್ನು ಕಾಯ್ದುಕೊಂಡರು. ಅಲ್ಲದೇ, ವಧು-ವರ ಸೇರಿದಂತೆ ಸಮಾರಂಭಕ್ಕೆ ಆಗಮಿಸಿದ್ದವರೆಲ್ಲ ಮಾಸ್ಕ್ ಧರಿಸಿದ್ದರು.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅಮೃತ್ ಪಟೇಲ್, ಬಿಇಡಿ ವಿದ್ಯಾರ್ಥಿ ಸುಭಶ್ರೀ ಜತೆ ಸಪ್ತಪದಿ ತುಳಿದರು. ಅಮೃತ್ ಪಟೇಲ್ ತಾಯಿ ಸ್ನೇಹಲತಾ ಅವರು ಮಾತನಾಡಿ, ಲಾಕ್ಡೌನ್ ಏಪ್ರಿಲ್ 14ಕ್ಕೆ ಕೊನೆಗೊಳ್ಳುತ್ತದೆ ಅಂದುಕೊಂಡಿದ್ದೆವು. ಹೀಗಾಗಿ ಏಪ್ರಿಲ್ 17ಕ್ಕೆ ಮದುವೆಯನ್ನು ಮರುನಿಗದಿ ಪಡಿಸಲಾಗಿತ್ತು. ಮತ್ತೆ ಲಾಕ್ಡೌನ್ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಅಮೃತ್ ಅವರಿಗೆ ರಜೆ ಇರದ ಕಾರಣ ಕೋವಿಡ್-19 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂದು ಸುಂದರಗಢ ಆಡಳಿತ ಮಂಡಳಿಗೆ ಮನವರಿಕೆ ಮಾಡಿ ಏಪ್ರಿಲ್ 17ರಂದೇ ವಿವಾಹ ಕಾರ್ಯ ನೆರವೇರಿಸಲು ಒಪ್ಪಿಗೆ ಪಡೆದರು.
ಇಡೀ ವಿವಾಹ ಸಮಾರಂಭದ ಉದ್ದಕ್ಕೂ ವಧು-ವರ ಸೇರಿದಂತೆ ಕುಟುಂಬ ವರ್ಗದವರು ಮತ್ತು ತುಂಬಾ ಬೇಕಾದ ಬಂಧು ಬಳಗವದರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡೆ ಸಂಪ್ರದಾಯಗಳನ್ನು ಮುಗಿಸಿದರು. ಅಲ್ಲದೆ, ಮದುವೆಗೂ ಮುನ್ನ ಮಹಾಮಾರಿ ಕರೊನಾ ತೊಲಗಲಿ ಎಂದು ಎರಡು ಕುಟುಂಬದ ಸದಸ್ಯರು ಅಮೃತ್ ಮನೆಯಲ್ಲಿ ಗಾಯತ್ರಿ ಯಜ್ಞವನ್ನು ನೇರವೇರಿಸಿದ್ದಾರೆ.
ಇನ್ನು ಮಾಜಿ ಸಿಎಂ ಎಚ್ಡಿಕೆ ಪುತ್ರ ನಿಖಿಲ್ ಮದುವೆ ವಿಚಾರಕ್ಕೆ ಬಂದರೆ, ಕೆಲವು ಸಂದರ್ಭಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೂ, ಹಲವು ಸಂದರ್ಭಗಳಲ್ಲಿ ಮಾಸ್ಕ್ ಧರಿಸದೇ ಒಟ್ಟಾಗಿ ಸೇರಿ ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿದರು ಎಂಬ ಆರೋಪವು ಕೇಳಿಬಂತು. ಅಲ್ಲದೇ, ಸಾಮಾಜಿಕ ಜಾಲತಾಣದಲ್ಲೂ ಪರ-ವಿರೋಧದ ಚರ್ಚೆಯಾಯಿತು. ಇದರ ನಡುವೆ ಸಿಎಂ ಬಿ.ಎಸ್. ಯಡಿಯೂರಪ್ಪನವರು ಎಚ್ಡಿಕೆ ಪರ ಬ್ಯಾಟ್ ಬೀಸಿ ಅನುಮತಿಯನ್ನು ಪಡೆದೇ ವಿವಾಹ ನೆರವೇರಿಸಿದ್ದಾರೆ ಎಂದರು. ಇದಕ್ಕೆ ಮಾಜಿ ಸಿಎಂ ಎಚ್ಡಿಕೆ ಸಹ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. (ಏಜೆನ್ಸೀಸ್)