

ಹಾಸನ: ತಮ್ಮನನ್ನು ಮದುವೆಯಾಗಲು ಒಪ್ಪದ ಯುವತಿಯರಿಬ್ಬರ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚಾವು ಗ್ರಾಮದಲ್ಲಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಹೋದರಿಯರಾದ ಯೋಗಿತಾ(22) ಮತ್ತು ಪುಷ್ಪಿತಾ ಹಲ್ಲೆಗೊಳಗಾದವರು. ನಾಗರಾಜ್ ಹಲ್ಲೆ ಮಾಡಿದವ. ಯೋಗಿತಾ ಮತ್ತು ಪುಷ್ಪಿತಾಳ ತಂದೆ ಇತ್ತೀಚಿಗೆ ನಿಧನರಾಗಿದ್ದರು. ಸಾವಿನ ಮನೆಯಲ್ಲಿ ಒಂದು ವರ್ಷದೊಳಗೆ ಶುಭಕಾರ್ಯ ಮಾಡಬೇಕು ಎನ್ನುವುದನ್ನೇ ನೆಪ ಮಾಡಿಕೊಂಡು ಏ.12ರಂದು ಸೋದರ ಮಾವ ನಾಗರಾಜ ತನ್ನ ತಮ್ಮನ ಮದುವೆ ಮಾತುಕತೆಗೆಂದು ತಾಯಿ ಹಾಗೂ ಅಜ್ಜಿ ಜತೆ ಬಂದಿದ್ದ. ಇದನ್ನೂ ಓದಿರಿ ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ 37 ಜನರಿಂದ ಅತ್ಯಾಚಾರ: ಹೆತ್ತಮ್ಮನ ಕುಮ್ಮಕ್ಕಿನಿಂದಲೇ ಕೃತ್ಯ, ಮುಂದೇನಾಯ್ತು?
ಮನೆಯ ಹಿರಿಯ ಮಗಳಾದ ನನ್ನ ಮೇಲೆ ಸಂಸಾರದ ಜವಾಬ್ದಾರಿ ಇದೆ ಸದ್ಯಕ್ಕೆ ನಾನು ಮದುವೆಯಾಗುವುದಿಲ್ಲ, ತಂಗಿಯನ್ನು ಚೆನ್ನಾಗಿ ಓದಿಸಬೇಕು, ಅಲ್ಲದೆ ಬಿಎಸ್ಸಿ ಓದಿರುವ ನಾನು ನಿನ್ನ ತಮ್ಮನನ್ನು ಮದುವೆಯಾಗುವುದಿಲ್ಲ ಎಂದು ಯೋಗಿತಾ ನಿರಾಕರಿಸಿದ್ದಾಳೆ. ಈ ವೇಳೆ ಅಕ್ಕ-ತಂಗಿ ಇಬ್ಬರೂ ಮದುವೆ ಪ್ರಸ್ತಾಪವನ್ನ ತಿರಸ್ಕರಿಸಿದ್ದಾರೆ. ಸಿಟ್ಟಿಗೆದ್ದ ನಾಗರಾಜ್ ಯುವತಿಯರಿಬ್ಬರ ಕೊಲೆಗೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡ ಸಹೋದರಿಯರನ್ನ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ನಾಗರಾಜ್, ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಅಜ್ಜಿ ಪುಟ್ಟಮ್ಮ, ಸೋದರತ್ತೆ ಅಕ್ಕಮ್ಮನನ್ನು ಬಂಧಿಸಲಾಗಿದೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.