

ಬೆಳಗಾವಿ: ಉತ್ತರ ಕರ್ನಾಟಕದ ಭಾಗದ ವಿವಿಧ ಸಮಸ್ಯೆಗಳ ಕುರಿತು ವಿಧಾನಮಂಡಲದಲ್ಲಿ ಮಂಗಳವಾರ ಸುದೀರ್ಘ ಚರ್ಚೆ ಜರುಗಿತು. ಪಕ್ಷಾತೀತವಾಗಿ ಸದಸ್ಯರು ಸಮಸ್ಯೆಗಳನ್ನು ಅನಾವರಣಗೊಳಿಸಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು. ಮುಂದಿನ ಅಧಿವೇಶನವನ್ನು 3 ವಾರಕ್ಕೆ ವಿಸ್ತರಿಸಿ ಈ ಭಾಗದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು. ತಮ್ಮ ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಶಾಸಕರು ಸಲಹೆಗಳನ್ನು ನೀಡಿದರು.
ಖಾಸಗಿ ಸಕ್ಕರೆ ಕಾರ್ಖಾನೆಗಳಿಂದ ಕಬ್ಬನ್ನು ತೂಕ ಮಾಡುವ ಸಂದರ್ಭದಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಎರಡರಿಂದ ಮೂರು ಟನ್ ರೈತರಿಗೆ ನಷ್ಟ ಆಗುತ್ತಿದ್ದು, ಇದನ್ನು ತಡೆಯಲು ರಾಜ್ಯ ಸರ್ಕಾರ ಪ್ರತಿ ಸಕ್ಕರೆ ಕಾರ್ಖಾನೆಯಲ್ಲಿ ಮಾನವರಹಿತ ತೂಕದ ಯಂತ್ರವನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿಸಿದಂತೆ, ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಮತ್ತು ಕಬ್ಬಿಗೆ ಸಂಬಂಧಿಸಿದ ಉತ್ಪನ್ನಗಳ ಉತ್ಪಾದನೆಗೆ ಸರ್ಕಾರ ಅನುಮತಿ ನೀಡಬೇಕು. ಮಹಾರಾಷ್ಟ್ರದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ನೀಡಿದ ಅನುದಾನದಂತೆ ರಾಜ್ಯದಲ್ಲೂ ಅನುದಾನ ನೀಡಬೇಕು ಎಂದು ಕಾಗವಾಡ ಶಾಸಕ ರಾಜು ಕಾಗೆ ಒತ್ತಾಯಿಸಿದರು.
ವರದಾ-ಬೆಡ್ತಿ ನದಿ ಜೋಡಣೆಯಿಂದ ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳ ಕುಡಿಯುವ ನೀರು ಮತ್ತು ಕೃಷಿಗೆ ಶಾಶ್ವತ ನೀರಿನ ಸಮಸ್ಯೆ ಸರಿದೂಗಿಸಬಹುದು. ಸವಣೂರು ಭಾಗದಲ್ಲಿ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 10-15 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಧಾರವಾಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಈ ಸಮಸ್ಯೆ ಇದೆ. ಹಾಗಾಗಿ ನದಿ ಜೋಡಣೆ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳಬೇಕು ಎಂದು ಸವಣೂರು ಶಿಗ್ಗಾಂವಿ ಶಾಸಕ ಯಾಸಿನ್ ಪಠಾಣ್ ಆಗ್ರಹಿಸಿದರು.
ಕಲಬುರಗಿ ಜಿಲ್ಲೆಯ ತೊಗರಿ ಬೆಳೆಗೆ ವಿಶ್ವಮಾನ್ಯತೆ ಸಿಗಬೇಕಿದೆ. ಕಲಬುರಗಿಯಲ್ಲಿ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ತೊಗರಿಯು ಈ ವರ್ಷ 3.5 ಲಕ್ಷ ಹೆಕ್ಟೇರ್ನಷ್ಟು ನಾಶ ಆಗಿದ್ದು, ಇನ್ನೂ ಅಧಿಕಾರಿಗಳು ಸಮೀಕ್ಷೆ ನಡೆಸಿಲ್ಲ. ಶೀಘ್ರವಾಗಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು. ಅಥಣಿ ಭಾಗದಲ್ಲಿ ಕಳಪೆ ಗುಣಮಟ್ಟದ ತೊಗರಿ ಬೀಜ ಪೂರೈಕೆಯಿಂದ 15000 ಹೆಕ್ಟೇರ್ ಬೆಳೆ ನಾಶ ಆಗಿದೆ. ವಿಶೇಷವಾಗಿ ತೊಗರಿಯಲ್ಲಿ ಔಷಧ ಗುಣಗಳಿದ್ದು, ತೊಗರಿ ಬೆಳೆ ರಕ್ಷಣೆ, ತಳಿ ಸಂಶೋಧನೆಗೆ ಸರ್ಕಾರ ಆದ್ಯತೆ ನೀಡಬೇಕೆಂದು ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ಗಡಿಭಾಗದ ಹಳ್ಳಿಗಳಲ್ಲಿನ ವಿದ್ಯಾರ್ಥಿಗಳಿಗೆ ರಹವಾಸಿ ಪ್ರಮಾಣಪತ್ರದಿಂದ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯ ನಿವಾರಿಸುವಂತೆ ಶಾಸಕಿ ಶಶಿಕಲಾ ಜೊಲ್ಲೆ ವಿಷಯ ಪ್ರಸ್ತಾಪಿಸಿದರು. ವಿದ್ಯಾರ್ಥಿಗಳು ಪಕ್ಕದ ಮಹಾರಾಷ್ಟ್ರದ ಗಡಿ ಭಾಗಕ್ಕೆ ಶೈಕ್ಷಣಿಕ ಉದ್ಯೋಗಕ್ಕಾಗಿ ತೆರಳುತ್ತಾರೆ. ಈ ವೇಳೆ ಅವರ ರಹವಾಸಿ ಪತ್ರ ಕರ್ನಾಟಕ ರಾಜ್ಯದ್ದಾಗಿರುತ್ತದೆ. ಆದರೆ, ಶೈಕ್ಷಣಿಕ ದಾಖಲೆಗಳು ಮಹಾರಾಷ್ಟ್ರದ ರಾಜ್ಯದಿಂದ ಪಡೆದಿರುತ್ತಾರೆ. ಹಾಗಾಗಿ ಅವರಿಗೆ ಎಲ್ಲೂ ಉದ್ಯೋಗ ಸಿಗುತ್ತಿಲ್ಲ. ಈ ಸಮಸ್ಯೆ ನಿವಾರಿಸಲು ಸರ್ಕಾರ ಚಿಂತಿಸಬೇಕು ಎಂದರು.
ಕಲಬುರಗಿಯಲ್ಲಿ ಸಚಿವಾಲಯ ಸ್ಥಾಪನೆಗೆ ಒತ್ತಾಯ. ಬೀದರ್-ರಾಯಚೂರು-ಬಳ್ಳಾರಿ-ಬೆಂಗಳೂರು ಚತುಷ್ಪಥ ಹೆದ್ದಾರಿ ನಿರ್ಮಾಣ. ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಒತ್ತಾಯ. ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಒತ್ತಾಯ ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಮುಳುಗುವ ಕಾಗವಾಡ ಕ್ಷೇತ್ರದ ಜುಗುಂ, ಶಹಾಪೂರ ಹಳ್ಳಿಗಳ ಸ್ಥಳಾಂತರ, ಸವಳು-ಜವಳು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸುವ ಯೋಜನೆಯಲ್ಲಿ ಹೆಚ್ಚಿನ ಅನುದಾನ ಮೀಸಲು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಅಭಿವೃದ್ಧಿ ಮತ್ತು ಮಾರುಕಟ್ಟೆ ವರ್ತಲ ರಸ್ತೆ ನಿರ್ಮಾಣ ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲೂಕಗಳಿಗೆ ಅನುದಾನ.
ನಮ್ಮ ಹೊಲ, ನಮ್ಮ ರಸ್ತೆ ಪುನರಾರಂಭಕ್ಕೆ ಆಗ್ರಹ. ಗುತ್ತಿಗೆ ಶಿಕ್ಷಕರಿಗೆ ಉತ್ತರದಾಯಿತ್ವ ನೀಡಿ, ಜವಾಬ್ದಾರಿ ನೀಡುವುದು. ಧಾರವಾಡದಲ್ಲಿ ಉದ್ದೇಶಿತ ಎಫ್ಎಂಸಿಜಿ ಕ್ಲಸ್ಟರ್ ನಿರ್ಮಾಣ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳುವುದು ಮತ್ತು ಭೂ ಮಂಜೂರು ಮಾಡಲು ಆಗ್ರಹ. ಹುಬ್ಬಳ್ಳಿಯ ಸಿದ್ಧಾರೂಢಮಠ, ಮೂರು ಸಾವಿರಮಠ, ನೃಪತುಂಗ ಬೆಟ್ಟ, ಎಲ್ಲಮ್ಮನಗುಡ್ಡವನ್ನು ಒಂದೇ ಪ್ರವಾಸೋದ್ಯಮ ಸರ್ಕಿಟ್ ಅಡಿ ತರುವುದು. ಚಿಂಚೋಳಿಯಲ್ಲಿ ಕೋರ್ಟ್ ಸ್ಥಾಪನೆ ಕುಮುಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮತ್ತು ಅಘನಾಶಿನಿ ನದಿಗೆ ಮೇಲ್ಸೇತುವೆ ನಿರ್ವಣಕ್ಕೆ ಅನುದಾನ.