ಅಂಗನವಾಡಿಯಲ್ಲಿ 3 ವರ್ಷದ ಬಾಲಕಿ ಮೇಲೆ ಬಿದ್ದ ವಿಷಕಾರಿ ಮಂಡಲದ ಹಾವು! ನಂತರ ನಡೆದಿದ್ದೇನು? Anganwadi

Anganwadi
Published on

Anganwadi : ಮೂರು ವರ್ಷದ ಬಾಲಕಿಯ ಮೇಲೆ ವಿಷಕಾರಿ ಹಾವು ಬಿದ್ದ ಭಯಾನಕ ಘಟನೆ ಕೇರಳದ ಕಕ್ಕನಾಡ್ ಎನ್‌ಜಿಒ ಕ್ವಾರ್ಟರ್ಸ್ ಬಳಿಯ ಇಲ್ಲತ್ತುಮುಕಲ್ ಸ್ಮಾರ್ಟ್ ಅಂಗನವಾಡಿಯಲ್ಲಿ ನಿನ್ನೆ (ಆಗಸ್ಟ್​ 12) ಮಧ್ಯಾಹ್ನ ನಡೆದಿದೆ.

ಮಗುವಿನ ಮೇಲೆ ಬಿದ್ದಿದ್ದು ವಿಷಕಾರಿ ಮಂಡಲದ ಹಾವು. ಅದೃಷ್ಟವಶಾತ್​ ಮಗುವಿಗೆ ಹಾವು ಕಡಿದಿಲ್ಲ. ಭಾರೀ ಅನಾಹುತದಿಂದ ಮಗು ಪಾರಾಗಿದೆ. ಊಟ ಮಾಡಿದ ನಂತರ ಮುಖ ತೊಳೆಯುತ್ತಿದ್ದಾಗ, ಕಟ್ಟಡದ ಮೇಲಿನಿಂದ ಹಾವು ಬಾಲಕಿಯ ಮೇಲೆ ಬಿದ್ದಿದೆ. ಆಕೆಯ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ ಅಂಗನವಾಡಿ ಸಿಬ್ಬಂದಿ ಹಾವನ್ನು ಹಿಡಿದು ಮಗುವನ್ನು ರಕ್ಷಿಸಿದ್ದಾರೆ.

ತ್ರಿಕ್ಕಾಕರ ಪುರಸಭೆಯ ಸ್ವಂತ ಕಟ್ಟಡದಲ್ಲಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿದೆ. ಆರು ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಹಾವು ದೇಹದ ಮೇಲೆ ಬಿದ್ದ ಬೆನ್ನಲ್ಲೇ ಮಗುವನ್ನು ಪರೀಕ್ಷೆಗಾಗಿ ತ್ರಿಕ್ಕಾಕರ ಸಹಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪರೀಕ್ಷೆಯ ವೇಳೆ ಹಾವು ಕಚ್ಚಿಲ್ಲ ಎಂದು ದೃಢಪಟ್ಟಿದೆ. ಇದರಿಂದ ಮಗುವಿನ ಪಾಲಕರು ನಿಟ್ಟುಸಿರುವ ಬಿಟ್ಟಿದ್ದಾರೆ. ಅಂಗನವಾಡಿ ಇರುವ ಕಟ್ಟಡದ ಬಳಿ ಹಳೆಯ ಸರ್ಕಾರಿ ವಸತಿಗೃಹಗಳಿದ್ದು, ಗಿಡಗಂಟಿಗಳಿಂದ ತುಂಬಿದೆ. ಪರಿಣಾಮ ವಿಷಪೂರಿತ ಹಾವುಗಳು ಸಾಕಷ್ಟಿವೆ ಎಂದು ಸ್ಥಳೀಯರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net