

ವಿಜಯಪುರ: ಶಾಲಾ-ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಅಪಾಯ ಲೆಕ್ಕಿಸದೆ ಸರ್ಕಾರಿ ಬಸ್ಗಳ ಟಾಪ್ ಮೇಲೆ ಹತ್ತಿ ಪ್ರಯಾಣಿಸುತ್ತಿದ್ದಾರೆ. ಸೂಕ್ತ ಬಸ್ ಸೌಲಭ್ಯವಿಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು ಬಸ್ಗೆ ಏಣಿ ಬಳಿ ಬಸ್ನ ಮೇಲ್ಭಾಗದಲ್ಲಿ ಕೂತು ಸಂಚರಿಸುವ ದುಸ್ಥಿತಿ ಬಂದಿದೆ.
ಇದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದ ವಿದ್ಯಾರ್ಥಿಗಳ ಗೋಳಾಟ. ಅಗತ್ಯ ಬಸ್ಗಳನ್ನು ಬಿಡುವಂತೆ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಏನಾದರೂ ಅನಾಹುತ ಸಂಭವಿಸಿದೆ ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳೇ ಹೊಣೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಶಾಲಾ-ಕಾಲೇಜಿಗೆ ತೆರಳುವ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಹೆಚ್ಚಿರುತ್ತೆ. ಆದರೆ ಅಗತ್ಯ ಸಾರಿಗೆ ಬಸ್ ಸಂಚಾರ ಇಲ್ಲದಿರುವ ಪರಿಣಾಮ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಸಂಕಷ್ಟ ಹೇಳತೀರದು. ಜಾಗ ಇಲ್ಲದಿದ್ದರೂ ನೂರಾರು ಸಂಖ್ಯೆಯಲ್ಲಿ ಒಂದೇ ಬಸ್ನಲ್ಲಿ ಸಂಚರಿಸುತ್ತಿದ್ದಾರೆ. ಬಸ್ನ ಒಳಗೆ ನಿಲ್ಲೋಕೂ ಜಾಗ ಇಲ್ಲದ ಕಾರಣ ಏಣಿ ಹಾಕಿ ಬಸ್ನ ಮೇಲೆ ಹತ್ತಿ ಜೀವ ಭಯದಲ್ಲೇ ಪ್ರಯಾಣಿಸಿದ್ದಾರೆ.