

ಮೈಸೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಜೆಡಿಎಸ್, ಇದೇ ತಿಂಗಳು(ಸೆ.28) ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ.
ಈ ಕುರಿತು ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಮುಂದಿನ ಬಾರಿ ಜೆಡಿಎಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲು ಮಿಷನ್-123 ಗುರಿ ಇಟ್ಟುಕೊಂಡಿದ್ದೇವೆ ಎಂದು ಪ್ರಕಟಿಸಿದರು.
ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬ ಕುರಿತು ಬಿಡದಿಯ ನನ್ನ ತೋಟದಲ್ಲೇ ಎರಡು ದಿನ ಕಾರ್ಯಾಗಾರ ನಡೆಸುತ್ತೇನೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಿಂದ ತೊಡಗಿಸಿಕೊಂಡಿದ್ದಾರೆ. ಈ ಹುಮ್ಮಸ್ಸು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಎಚ್ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಕುರಿತು ಹಗುರವಾಗಿ ಮಾತನಾಡಬೇಡಿ, ಹಗುರವಾಗಿ ಮಾತನಾಡಿದವರು ಏನಾದರು ಎಂಬ ಚರಿತ್ರೆಯೇ ಇದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ಗೆ ರಾಜ್ಯದ ವಾಸ್ತವ ಸ್ಥಿತಿ ಕುರಿತು ಅರಿವು ಇಲ್ಲ. ಜೆಡಿಎಸ್ ಮುಳುಗುತ್ತಿರುವ ಹಡಗಲ್ಲ, ಬಿಜೆಪಿ ರಾಜ್ಯದಲ್ಲಿ ಮುಳುಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಜೆಡಿಎಸ್ನ ಫ್ಯೂಸ್ ಕೀಳಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್ ಗ್ರೌಂಡಿಂಗ್ ಬಹಳ ಭದ್ರವಾಗಿದೆ. ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುವವರು ಮೈಸೂರು ಮೇಯರ್ ಚುನಾವಣೆ ಸಂದರ್ಭ ಸಹಕಾರ ಕೋರಿ ಶಾಸಕ ಸಾ.ರಾ.ಮಹೇಶ್ ಮನೆ ಬಾಗಿಲು ತಟ್ಟಿದ್ದು ಏತಕ್ಕೆ? ನಾವೇನು ಬೆಂಬಲ ಕೋರಿ ಅವರ ಬಳಿಗೆ ಹೋಗಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.