

ಕನ್ನಡದಲ್ಲಿ ಬರೆಯುತ್ತಿರುವ ಭಾರತೀಯ ಲೇಖಕಿ ಬಾನು ಮುಷ್ತಾಕ್ ಹಾಗೂ ಅವರ ಕಥೆಗಳನ್ನು ಇಂಗ್ಲಿಷ್ಗೆ ಅನುವಾದಿಸಿರುವ ಲೇಖಕಿ ದೀಪಾ ಭಾಸ್ತಿ ಅವರಿಗೆ ವಿಶ್ವದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ 2025ರ ಅಂತಾರಾಷ್ಟ್ರೀಯ ಬುಕರ್ ಗೌರವ ಸಂದಿರುವುದು ಇಡೀ ಕನ್ನಡನಾಡು ಹೆಮ್ಮೆ ಪಡಬೇಕಾದ ವಿಚಾರ. ಇದೇ ಮೊದಲ ಬಾರಿಗೆ ಕನ್ನಡ ಸಾಹಿತಿಯೊಬ್ಬರಿಗೆ ಈ ಗೌರವ ಸಂದಿದೆ. ಈ ಮೂಲಕ ಬಾನು ಮುಷ್ತಾಕ್ ಜಗತ್ತಿನ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಕನ್ನಡ ಭಾಷೆಯ ಕಂಪನ್ನು ಜಾಗತಿಕವಾಗಿ ಇನ್ನಷ್ಟು ಪಸರಿಸಲು ಹಾಗೂ ಕನ್ನಡದ ಸಾಹಿತ್ಯದ ಸತ್ವವನ್ನು ತೆರೆದಿಡಲು ಈ ಪ್ರಶಸ್ತಿ ಪೂರಕವಾಗಿದೆ. ಇದು ಕನ್ನಡಕ್ಕೂ ಕನ್ನಡ ಸಾಹಿತ್ಯಕ್ಕೂ ಕನ್ನಡ ಕಥಾಸಾಮರ್ಥ್ಯಕ್ಕೂ ಸಂದ ಗೌರವ. ಸ್ವತಃ ಬಾನು ಅವರೇ ಉದ್ಗರಿಸಿದಂತೆ ಕನ್ನಡ ಸಾಹಿತ್ಯಕ್ಕೇ ಸಿಕ್ಕ ಗೆಲುವು.
ಸಾಹಿತ್ಯವೆಂದರೆ ಸತ್ಯದ ಹುಡುಕಾಟವೂ ಹೌದು. ಬರಹಗಾರರು ಸಮಾಜದ ಓರೆಕೋರೆಗಳನ್ನು ತೋರಿಸುತ್ತಿರುತ್ತಾರೆ. ತಮ್ಮದಲ್ಲದಿದ್ದರೂ ಬಡತನ, ನೋವು, ಹತಾಶೆಯಂತಹ ಬದುಕನ್ನು ತಮ್ಮದೇ ಆಗಿ ಅನುಭವಿಸಿ ಬರೆಯುತ್ತಾರೆ. ಆದ್ದರಿಂದಲೇ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯವು ಸಮಾಜದ ಸೂಕ್ಷ್ಮ ಸಂವೇದನೆಯನ್ನು, ಮೌಲ್ಯಗಳನ್ನು, ಸಜ್ಜನಿಕೆಯನ್ನು ಮರುಸ್ಥಾಪಿಸುತ್ತ ಇಡೀ ವ್ಯವಸ್ಥೆಯ ಸಹೃದಯ ಭಾವದ ಎಳೆಯನ್ನು ಸದಾ ಗಟ್ಟಿಗೊಳಿಸುತ್ತ ಬಂದಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಗತಿಗಳ ಕುರಿತು ಆಡಳಿತವು ಅಸಡ್ಡೆ ಬೆಳೆಸಿಕೊಳ್ಳುತ್ತಿರುವ ವರ್ತಮಾನದಲ್ಲಿ ಇಂಥ ಪ್ರಶಸ್ತಿಗಳ ಪಾತ್ರ ಮಹತ್ವದ್ದಾಗಿದೆ.
ತಮ್ಮ ಕಥೆಗಳಲ್ಲಿ ವ್ಯವಸ್ಥೆಗೆ ಮುಖಾಮುಖಿಯಾಗುತ್ತ ಸಾಗುವ ಬಾನು ಮುಷ್ತಾಕ್ ಕೂಡ ಸಮಾಜಕ್ಕೆ ತೀರ ಅಗತ್ಯವಾಗಿರುವ ಶುದ್ಧ ಮಾನವೀಯ ನೆಲೆಯಲ್ಲಿ ವ್ಯವಸ್ಥೆಯ ಕ್ರೌರ್ಯವನ್ನು ಅನಾವರಣಗೊಳಿಸುತ್ತ ಬಂದವರು. ಮಾತ್ರವಲ್ಲ, ಬಡತನ ಮತ್ತು ಹೆಣ್ಣಿನ ನೋವಿನ ಬದುಕನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟವರು. ಮೌಲ್ಯಗಳನ್ನು ಕಾಪಾಡುವ ಸಾಹಿತ್ಯದ ಆಶಯಕ್ಕೆ ಪೂರಕವಾಗಿ ಬರೆಯುತ್ತ ಬಂದವರು.
ಬಾನು ಅವರ ಕಥೆಗಳಲ್ಲಿ ಮುಸ್ಲಿಂ ಸಂಸ್ಕೃತಿಯ ಪರಿಚಯವಿದೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಎಲ್ಲ ಕೋಮಿನ, ಎಲ್ಲ ವರ್ಗದ ಮಹಿಳೆಯರು ಪಡುವ ಬವಣೆಗಳನ್ನು ಆ ಕಥೆಗಳು ಪ್ರತಿಬಿಂಬಿಸುತ್ತವೆ. ಹೋರಾಟ ಮನೋಭಾವದ ಹೆಣ್ಣುಮಕ್ಕಳು ಅವರ ಅನೇಕ ಕಥೆಗಳ ಪಾತ್ರಗಳಾಗಿದ್ದಾರೆ. ಆ ಪಾತ್ರಗಳು ವಾಸ್ತವ ಸಮಾಜದ ದೌರ್ಜನ್ಯದ ವಿರುದ್ಧ ಸ್ತ್ರೀ ಸಮುದಾಯದಲ್ಲಿ ಮನೋಭೂಮಿಕೆಯನ್ನು ಸಿದ್ಧಗೊಳಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಅವರ ಸಮೃದ್ಧ ಅನುಭವದಿಂದ ಮೂಡಿಬಂದ ಬರಹಕ್ಕೆ ಬುಕರ್ ಗರಿ ಅರ್ಹವಾಗಿಯೇ ಸಂದಿದೆ. ಸಮರ್ಥವಾಗಿ ಅನುವಾದಿಸಿದ ದೀಪಾ ಭಾಸ್ತಿ ಅವರ ಕೊಡುಗೆಯೂ ಗಮನಾರ್ಹವೇ. ಇಬ್ಬರಿಗೂ ಅಭಿನಂದನೆಗಳು.