

ಸೊರಬ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರಾಜ್ಯಕ್ಕೆ ಹೊಸ ರೀತಿಯ ಅಭಿವೃದ್ಧಿಯನ್ನು ಪರಿಚಯಿಸಿದ ಮಹಾನ್ ನಾಯಕ. ಅವರ ಸಾವು ಅತೀವ ದುಃಖ ತಂದಿದೆ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎಸ್.ಎಂ.ಕೃಷ್ಣ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನನ್ನ ತಂದೆ ಮತ್ತು ಎಸ್.ಎಂ.ಕೃಷ್ಣ ಅವರ ನಡುವೆ ಉತ್ತಮ ರಾಜಕೀಯ ಸಂಬಂಧವಿತ್ತು. ಬಾಲ್ಯದಿಂದಲೂ ಅವರ ಸಂಪರ್ಕದಲ್ಲಿ ಇದ್ದ ನನಗೆ ಮುಂತ್ರಿ ಸ್ಥಾನ ನೀಡುವ ಮೂಲಕ ಸೊರಬ ತಾಲೂಕಿಗೆ ಹತ್ತಿರವಾಗಿದ್ದರು ಎಂದರು.
ತಾಲೂಕಿನ ನೀರಾವರಿ ಯೋಜನೆಗಳಿಗೆ ಇವರ ಕಾಲದಲ್ಲಿ ಪ್ರಸ್ತಾವನೆ ನೀಡಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಅವರ ಒಡನಾಟ ಬಹಳಷ್ಟಿತ್ತು. ಡಾ. ರಾಜ್‌ಕುಮಾರ್ ಅವರ ಅಪಹರಣ ಕಾಲದಲ್ಲಿ ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿವರ್ಹಿಸಿದ್ದರು. ಅವರ ಕಾಲದಲ್ಲಿ ಭೀಕರ ಬರಗಾಲ ಎದುರಾಗಿತ್ತು. ವಿಪಕ್ಷಗಳ ಸಹಕಾರದಿಂದ ಉತ್ತಮವಾಗಿ ಕೆಲಸ ಮಾಡಿದರು ಎಂದು ಹೇಳಿದರು.
ನಾನು ಬಿಜೆಪಿ ಸೇರಲು ಮಾರ್ಗದರ್ಶನ ಮಾಡಿದ ಅವರು ಉತ್ತಮ ನಿರ್ಧಾರ ತಗೆದುಕೊಂಡಿದ್ದೀರಿ. ಇಂದಿನ ಕಾಂಗ್ರೆಸ್, ಇಂದಿರಾ ಕಾಂಗ್ರೆಸ್‌ಗೂ ಬಹಳಷ್ಟು ವ್ಯತ್ಯಾಸವಿದೆ ಎಂದು ನಾವುಗಳೆಲ್ಲ ಬಿಜೆಪಿಗೆ ಸೇರಲು ಹುರಿದುಂಬಿಸಿದರು. ಅವರ ಅಭಿವೃದ್ಧಿ ಕೆಲಸ ಇಂದಿಗೂ ಮಾತನಾಡುತ್ತವೆ ಎಂದು ಶ್ಲಾಸಿದರು.
ಮುಖಂಡರಾದ ಎಂ.ಡಿ.ಉಮೇಶ್, ಶಿವನ ಗೌಡ, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಅಭಿಷೇಕ್, ರಂಗನಾಥ ಮೊಗವೀರ, ರಂಗಪ್ಪ, ಡಿ. ಶಿವಯೋಗಿ, ಅಶೋಕ್ ಶೇಟ್, ಚಂದ್ರು, ಗುರುಮೂರ್ತಿ ಇತರರಿದ್ದರು.