

ಭದ್ರಾವತಿ: ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ವಚನ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ಪೂರ್ತಿ ಇಂಟರ್ ನ್ಯಾಷನಲ್ ಸ್ಕೂಲ್ ಶಿಕ್ಷಣ ಸಂಯೋಜಕಿ ಬಿ.ಮಮತಾ ನವೀನ್ ಹೇಳಿದರು.
ನಗರದ ನ್ಯೂಟೌನ್ ಸಿದ್ಧಾರ್ಥ ಅಂಧರ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಎಂ.ಮಲ್ಲಿಕಾರ್ಜುನ ಕೋಠಿ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಶರಣರು ರಚಿಸಿದ ವಚನಗಳು ಪ್ರತಿಯೊಂದು ಅರ್ಥಪೂರ್ಣ. ಬಸವಾದಿ ಶಿವಶರಣರು ಜನರಲ್ಲಿ ಜ್ಞಾನದ ಅರಿವು ಮೂಡಿಸಿದರು. ವಚನಗಳು ಧಾರ್ಮಿಕ ಸಂಗತಿಗಳಿಗೆ ಮೀಸಲಾಗಿರದೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಭವಿಷ್ಯದ ಸಂಗತಿಗಳ ಬಗ್ಗೆಯೂ ಪ್ರಭಾವ ಬೀರಿವೆ ಎಂದು ತಿಳಿಸಿದರು.
ಯಾರು ಧರ್ಮದ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದರೂ, ದೇವಾಲಯಗಳಲ್ಲಿ ಪ್ರವೇಶ ನಿರಾಕರಿಸಿದರೂ ಅಂತಹ ಸಮಯದಲ್ಲಿ ವಚನಕಾರರು ಧರ್ಮವನ್ನೇ ಜನರ ಬಳಿಗೆ ಒಯ್ದರು. ದೇವರು ನಮ್ಮಲ್ಲಿಯೇ ಇದ್ದಾನೆ, ಅದಕ್ಕೆ ಪೂರಕವಾಗಿ ಇಷ್ಟಲಿಂಗದ ಪರಿಕಲ್ಪನೆ ನೀಡಿದರು. ಜಾತಿ, ಮತ, ಭೇದ, ಲಿಂಗ ತಾರತಮ್ಯ, ವಯಸ್ಸಿನ ಅಂತರವಿಲ್ಲದೆ ಸರ್ವರಿಗೂ ಇಷ್ಟಲಿಂಗ ದೀಕ್ಷೆ ನೀಡಿದರು. ಆ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ ಮಾಡಿದ್ದರು ಎಂದರು.
ನ್ಯೂಟೌನ್ ಸಿದ್ಧಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಮಾತನಾಡಿ, ವಚನ ಸಾಹಿತ್ಯವು ಸಮಾಜದ ಬಗ್ಗೆ ಕಳಕಳಿ ಹೊಂದಿದೆ. ಕನ್ನಡ ಸಾಹಿತ್ಯ ಪರಿಷತ್ ರಾಜ್ಯದಲ್ಲಿ ನಾಡು ನುಡಿ ರಕ್ಷಣೆ ಬಗ್ಗೆ ಕಟಿಬದ್ಧವಾಗಿದೆ. ಗಡಿ, ಭಾಷೆ ಸಮಸ್ಯೆ, ನದಿ ನೀರಿನ ಹಂಚಿಕೆ ವಿವಾದ, ಸಾಹಿತ್ಯ ಸಾಂಸ್ಕೃತಿಕ ರಕ್ಷಣೆ ವಿಚಾರದಲ್ಲಿ ಕಸಾಪ ಸಾಮಥರ್ಯ್ವನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್.ಸುಧಾಮಣಿ, ಎಂ.ಆರ್.ರೇವಣಪ್ಪ, ಎಚ್.ತಿಮ್ಮಪ್ಪ, ನಾಗರತ್ನ ವಿ.ಕೋಠಿ, ಶೈಲಾ ವಿ.ಕೋಠಿ, ಕಮಲಾಕರ್ ಇತರರಿದ್ದರು.