

ಅಯೋಧ್ಯೆ: ಜನವರಿ 22 ರಂದು ಭಗವಾನ್ ರಾಮನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ದೇಶ ಮತ್ತು ವಿದೇಶಗಳಿಂದ ರಾಮಲಲ್ಲಾಗೆ ಉಡುಗೊರೆಗಳು ಬರುತ್ತಲಿವೆ. ಅಂದಹಾಗೆ ಲಕ್ನೋದಲ್ಲಿ ವಾಸಿಸುವ ತರಕಾರಿ ವ್ಯಾಪಾರಿ, 5 ವರ್ಷಗಳ ಕಠಿಣ ಪರಿಶ್ರಮದ ನಂತರ ಒಂಬತ್ತು ದೇಶಗಳ ಸಮಯವನ್ನು ಏಕಕಾಲದಲ್ಲಿ ಹೇಳುವ ವಿಶ್ವ ಗಡಿಯಾರವನ್ನು ಸಿದ್ಧಪಡಿಸಿದ್ದಾರೆ.
ಭಾರತ ಸರ್ಕಾರದಿಂದ ಪೇಟೆಂಟ್ ಪಡೆದ ನಂತರ, ತರಕಾರಿ ವ್ಯಾಪಾರಿ ಈ ವಿಶ್ವ ಗಡಿಯಾರವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಶ್ವ ಗಡಿಯಾರವನ್ನು ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಇರಿಸಲು ದಾನಿ ವಿನಂತಿಸಿದ್ದಾರೆ. ಚಂಪತ್ ರೈ ಅವರು ಇದನ್ನು ಕರಸೇವಕ ಪುರಂನಲ್ಲಿರುವ ಕಚೇರಿಯಲ್ಲಿ ಸ್ವೀಕರಿಸಿದ್ದಾರೆ.
ಲಕ್ನೋದಲ್ಲಿ ವಾಸಿಸುವ ಅನಿಲ್ ಕುಮಾರ್ ಸಾಹು ಅವರು ತರಕಾರಿ ವ್ಯಾಪಾರ ಮಾಡುತ್ತಾರೆ. ಅವರು ರಾಮನಲ್ಲಿ ಆಳವಾದ ನಂಬಿಕೆಯನ್ನು ಹೊಂದಿದ್ದು, 5 ವರ್ಷಗಳ ಕಠಿಣ ಪರಿಶ್ರಮ ವಹಿಸಿ ಅವರು ಗಡಿಯಾರವನ್ನು ಪ್ರಸ್ತುತಪಡಿಸಿದ್ದಾರೆ. ಏಕಕಾಲದಲ್ಲಿ ಒಂಬತ್ತು ದೇಶಗಳ ಸಮಯವನ್ನು ಹೇಳುವ ಗಡಿಯಾರವನ್ನು ತಯಾರಿಸಿರುವುದಾಗಿ ಅನಿಲ್ ಕುಮಾರ್ ಸಾಹು ತಿಳಿಸಿದ್ದಾರೆ. ಇದನ್ನು ನಿರ್ಮಿಸಲು 5 ವರ್ಷಗಳ ಶ್ರಮ ಬೇಕಾಯಿತು. ಇದಲ್ಲದೇ ಭಾರತ ಸರ್ಕಾರದಿಂದ ಪೇಟೆಂಟ್ ಕೂಡ ಪಡೆದೆ. ಭಾರತವನ್ನು ಹೊರತುಪಡಿಸಿ, ಈ ಗಡಿಯಾರವು ಏಕಕಾಲದಲ್ಲಿ ಮೆಕ್ಸಿಕೊ, ಜಪಾನ್, ಟೋಕಿಯೊ, ದುಬೈ, ವಾಷಿಂಗ್ಟನ್ ಸಮಯವನ್ನು ಹೇಳುತ್ತದೆ ಎಂದು ಸಾಹು ಹೇಳಿದರು.
ಅನಿಲ್ ಕುಮಾರ್ ಸಾಹು ಅವರು ರಾಮ ಜನ್ಮಭೂಮಿಯಲ್ಲದೆ, ಪ್ರಸಿದ್ದ ಸಿದ್ದ ಪೀಠ ಹನುಮಾನ್ ಗರ್ಹಿ ಮತ್ತು ಅಯೋಧ್ಯೆ ಜಂಕ್ಷನ್ ರೈಲು ನಿಲ್ದಾಣಕ್ಕೂ ಈ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಭಾರತ ಮತ್ತು ವಿದೇಶಗಳಿಂದ ಬರುವ ಭಕ್ತರು ಸುಲಭವಾಗಿ ಸಮಯವನ್ನು ನೋಡಬಹುದು. ಚಂಪತ್ ರೈ ಅವರು ಅನಿಲ್ ಕುಮಾರ್ ಸಾಹು ಅವರ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.