ಪ್ರತಿ ದಿನ 5 ಸಾವಿರ ಕರೊನಾ ಟೆಸ್ಟ್, ಸದ್ಯಕ್ಕೆ ಮಾಸ್ಕ್ ಕಡ್ಡಾಯವಿಲ್ಲ: ದಿನೇಶ್ ಗುಂಡೂರಾವ್

Dinesh Gundurao
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಟೆಸ್ಟಿಂಗ್ ಸಂಖ್ಯೆಯನ್ನು ನಾಳೆಯಿಂದ 5 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ಹೊಸತಳಿ ಜೆಎನ್-1 ನಿಯಂತ್ರಿಸುವ ಬಗ್ಗೆ ತಜ್ಞರ ಸಲಹೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ 34 ಪಾಸಿಟಿವ್ ಕೇಸ್ ಬಂದಿರುವ ಬಗ್ಗೆ ಮಾಹಿತಿ ಇದೆ. ಸಭೆಯಲ್ಲಿ ಸಲಹೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಕರೊನಾ ಟೆಸ್ಟ್ ಹೆಚ್ಚಳ ಮಾಡುತ್ತಿದ್ದೇವೆ. ನಿನ್ನೆ 3500 ಪರೀಕ್ಷೆ ಮಾಡಿದ್ದೇವೆ. ಕರೊನಾ ಲಸಿಕೆ ನೀಡುವ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಮಾಸ್ಕ್​​​​ ಧರಿಸಿದ್ದರೆ ಒಳ್ಳೆಯದು ಎಂದು ಹೇಳಿದ್ದೇವೆ. ಆದರೆ, ಮಾಸ್ಕ್​​​​ ಕಡ್ಡಾಯ ಮಾಡಿಲ್ಲ. ಕರೊನಾ ಮಾರ್ಗಸೂಚಿಯಲ್ಲಿ ಮಾರ್ಪಡು ಮಾಡುವ ಸಾಧ್ಯತೆ ಇದ್ದರೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮೂರು ಕಡೆ ಜೆನೋಮಿಕ್ ಸಿಕ್ವೇನ್ಸ್ ಲ್ಯಾಬ್‍ಗಳು ಇವೆ. ಒಂದು ಬಾರಿಗೆ 99 ಟೆಸ್ಟ್ ಮಾಡಬೇಕಾಗುತ್ತದೆ. ಇದಕ್ಕೆ ಒಮ್ಮೆಗೆ 15 ಲಕ್ಷ ರೂ. ಖರ್ಚು ಆಗಲಿದೆ. ಕರೊನಾ ಟೆಸ್ಟ್​​​​ಗೆ ಅಗತ್ಯವಿರುವ ಕಿಟ್‍ಗಳು ಲಭ್ಯ ಇವೆ. ಸದ್ಯಕ್ಕೆ ಟೆಸ್ಟ್ ಪ್ರಮಾಣ ಹೆಚ್ಚಳ ಮಾಡಲಾಗುವುದು ಎಂದರು.

ರಾಜ್ಯದ ಜನರು ಆತಂಕಪಡುವ ಅಗತ್ಯವಿಲ್ಲ. ಈ ಉಪತಳಿ ಅಪಾಯಕಾರಿ ಅಲ್ಲ ಎಂಬುದನ್ನು ತಜ್ಞರು ಈಗಾಗಲೇ ಹೇಳಿದ್ದಾರೆ. ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ವಲ್ಪ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ಕೂಡ ಈಗಾಗಲೇ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ಎದುರಿಸಲು ಸನ್ನದ್ದರಾಗುವಂತೆ ಎರಡು ಮೂರು ಬಾರಿ ಸಭೆ ನಡೆಸಿ ಆಸ್ಪತ್ರೆಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net