ಭಾರತದಲ್ಲೊಂದು ವಿಶಿಷ್ಟ ಫ್ರೆಂಚ್​ ಕ್ರಾಂತಿ..

Untitled design (3)
Published on
ಇತ್ತೀಚೆಗೆ ನನ್ನ ಗುಜರಾತಿ ಗೆಳೆಯನೊಬ್ಬನ ಮಗನ ಮದುವೆಗೆ ಹೋಗಿದ್ದೆ. ಆತ ತೊಂಭತ್ತರ ದಶಕದಲ್ಲಿ ನಾನು ಗುಜರಾತ್​ನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದ. ಅಲ್ಲಿಂದ ವಾಪಸ್ ಕರ್ನಾಟಕಕ್ಕೆ ಬಂದು ಸೇರಿಕೊಂಡ ಮೇಲೆ ಒಂದೆರಡು ಬಾರಿ ಮಾತನಾಡಿದ್ದೆವು ಅಷ್ಟೆ. ಆದರೆ ಆಗಲೇ ತನ್ನ ಮಗ ತೋಟಗಾರಿಕೆಯಲ್ಲಿ ಪದವಿ ಪಡೆದಿದ್ದರೂ ನೌಕರಿ ಸಿಗದಿರುವ ಬಗ್ಗೆ ಆತನಲ್ಲಿ ವಿಷಾದ ಇರುವುದನ್ನು ನಾನು ಗಮನಿಸಿದ್ದೆ. ಮದುವೆಯ ಕರೆಯೋಲೆ ಬಂದಾಗ ದೋಸ್ತಿಯ ಮುಲಾಜಿಗೆ ಕೆಲಸ ಕಾರ್ಯಗಳನ್ನೆಲ್ಲ ಬದಿಗಿಟ್ಟು ಹೊರಡಲೇಬೇಕಾಯ್ತು. ಮದುವೆಯಂತೂ ಟಿಪಿಕಲ್ ಗುಜರಾತಿ ಶೈಲಿಯಲ್ಲಿ ಧಾಂಧೂಂ ಆಗಿ ಜರುಗಿತು.

ಕೆಲ ವರ್ಷಗಳ ಹಿಂದೆಯಷ್ಟೇ ನನ್ನ ಬಳಿ ಪುತ್ರನ ಭವಿಷ್ಯದ ಕುರಿತು ಚಿಂತಿಸುತ್ತಿದ್ದ ಗೆಳೆಯನ ಹಣೆಯ ನೆರಿಗೆಗಳು ಮಾಯವಾಗಿ ಮಂದಹಾಸ ಮೂಡಿರುವುದನ್ನು ಕಂಡು ನನಗೂ ಖುಷಿಯಾಗಿತ್ತು. ವಾಪಸ್ ಬರುವಾಗ ನನ್ನನ್ನು ಬೀಳ್ಕೊಡಲು ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಗೆಳೆಯ ದಾರಿಯಲ್ಲಿ ಮಗನ ಸಾಹಸದ ಕುರಿತು ಹೇಳುತ್ತಿದ್ದ. ಎಲ್ಲೂ ನೌಕರಿ ಸಿಗದ ಆತ ಅಪ್ಪನ ಬಳಿ ತಾನು ಕೃಷಿ ಕಾರ್ಯಕ್ಕಿಳಿಯುವುದಾಗಿ ಹೇಳಿಕೊಂಡಾಗ ಅಪ್ಪ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡು ತನ್ನ ಹಳ್ಳಿಯಲ್ಲಿದ್ದ ಪಿತ್ರಾರ್ಜಿತ ಆಸ್ತಿಯನ್ನು ಬಿಟ್ಟುಕೊಟ್ಟ. ಅಲ್ಲಿ ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದ ಹತ್ತಿ ಬೆಳೆ ಕೈ ಹಿಡಿಯದೇ ನಂತರದಲ್ಲಿ ಮತ್ತೆ ನಿಟ್ಟುಸಿರು. ಹೀಗಿರುವಾಗ ಕೆಲ ದಿನಗಳ ಬಿಡುವಿನಿಂದ ಮತ್ತೆ ಅಪ್ಪನ ಬಳಿ ಬಂದ ಪುತ್ರ ಹೊಸದೊಂದು ಆಲೋಚನೆಯೊಂದಿಗೆ ಬಂದಿದ್ದ. ಮೊದಲ ಪ್ರಯತ್ನದ ಏಟು ಇನ್ನೂ ಮಾಸದಿದ್ದರೂ ಪುತ್ರನ ಮೇಲಿನ ಪ್ರೇಮದಿಂದ ಒಪ್ಪಿಕೊಂಡ ಅಪ್ಪ ತನ್ನ ಉಳಿತಾಯದ ಹಣದ ಜೊತೆಗೆ ಬ್ಯಾಂಕ್ ಸಾಲದ ವ್ಯವಸ್ಥೆಯನ್ನೂ ಮಾಡಿ ಮಗನ ಬೆನ್ನಿಗೆ ನಿಂತ. ಈ ಬಾರಿ ಆತ ಹೂಡಿದ ಬಾಣ ಸರಿಯಾಗಿ ಗುರಿಗೆ ನಾಟಿತ್ತು. ಹಾಕಿದ ಬಂಡವಾಳವನ್ನು ಒಂದೇ ವರ್ಷಕ್ಕೆ ವಾಪಸ್ ಪಡೆದ ಮಗ ಮತ್ತೆಂದೂ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಮೊದಲ ಬಾರಿ ಹತ್ತಿ ಬೆಳೆ ಬೆಳೆಯಲು ಹೋಗಿ ಸೋತಿದ್ದ ಗೆಳೆಯನ ಮಗ ಎರಡನೇ ಬಾರಿ ಮತ್ತೆ ಕೃಷಿಗೆ ಕೈಹಾಕುವ ಪೂರ್ವದಲ್ಲಿ ಮಾರುಕಟ್ಟೆಯನ್ನು ಅವಲೋಕಿಸಿದಾಗ ಆಲೂಗಡ್ಡೆಗೆ ಏರುತ್ತಿರುವ ಬೇಡಿಕೆಯನ್ನು ಗಮನಿಸಿದ್ದ. ಹೀಗಾಗಿ ಈ ಬಾರಿ ಪೂರ್ವ ತಯಾರಿಯೊಂದಿಗೆ ಹತ್ತಿಯ ಬದಲಿಗೆ ಆಲೂಗಡ್ಡೆಯ ಕೃಷಿಗಿಳಿದ ಆತ ಈ ಕಾರಣಕ್ಕೆ ಜಾಕ್​ಪಾಟ್ ಹೊಡೆದ. ಆದರೆ ಈ ಯಶೋಗಾಥೆ ಕೇವಲ ಆತನದ್ದಷ್ಟೇ ಅಲ್ಲ ಇತ್ತಿ್ತಚಿನ ಕೆಲ ವರ್ಷಗಳಿಂದ ಗುಜರಾತಿನ ಹಲವು ರೈತರು ಈ ಯಶಸ್ಸಿನ ಫಲವನ್ನು ಉಣ್ಣುತ್ತಿದ್ದಾರೆ. ಅದಕ್ಕೆ ಕಾರಣ ಮಾತ್ರ ವಿದೇಶಿ ಕುರುಕಲು ತಿಂಡಿ ಫ್ರೆಂಚ್ ಫ್ರೖೆ.

ಎಲ್ಲ ಅಡುಗೆಗಳಿಗೂ ಒಂದು ಮೂಲವಿರುವಂತೆ ಫ್ರೆಂಚ್ ಫ್ರೖೆಗೂ ಒಂದು ಮೂಲವಿದೆ. ಫ್ರೖೆಗೆ ಮೊದಲು ಫ್ರೆಂಚ್ ಇದೆ ಅಂದಮಾತ್ರಕ್ಕೆ ಇದು ಫ್ರಾನ್ಸ್ ಮೂಲದ್ದು ಎಂದು ನೀವೆಂದುಕೊಂಡರೆ ನಿಮ್ಮ ಊಹೆ ತಪ್ಪು. ಅಸಲಿಗೆ ಫ್ರೆಂಚ್ ಫ್ರೖೆ ಮೂಲ ಬೆಲ್ಜಿಯಂ. ಈ ಕುರಿತು ಚಾಲ್ತಿಯಲ್ಲಿರುವ ಕಥೆಯ ಪ್ರಕಾರ ಹದಿನಾರನೇ ಶತಮಾನದ ಆರಂಭದಲ್ಲಿ ಬೆಲ್ಜಿಯಂನ ಮ್ಯೂಸ್ ಎಂಬ ಪುಟ್ಟ ಹಳ್ಳಿಯೊಂದರ ಜನರು ಊಟಕ್ಕಾಗಿ ತಮ್ಮೂರಿನ ನದಿ ತೀರದಲ್ಲಿ ಮೀನುಗಾರಿಕೆ ನಡೆಸಿ ಆ ಮೀನುಗಳನ್ನು ಎಣ್ಣೆಯಲ್ಲಿ ಕರಿದು ಊಟದಲ್ಲಿ ಬಳಸುತ್ತಿದ್ದರು. ಆದರೆ ಚಳಿಗಾಲದಲ್ಲಿ ನದಿಯು ಮಂಜುಗಡ್ಡೆಯಾಗಿ ಪರಿವರ್ತನೆ ಆಗುತ್ತಿದ್ದುದರಿಂದ ಅವರಿಗೆ ಅಡುಗೆಗೆ ಮೀನು ಸಿಗುತ್ತಿರಲಿಲ್ಲ. ಇದಕ್ಕೆ ಅವರು ಕಂಡುಕೊಂಡ ಉಪಾಯ ಆಲೂಗಡ್ಡೆ. ಆಲೂಗಡ್ಡೆಯನ್ನು ಸಣ್ಣಗೆ ಕುಯ್ದು ಮೀನಿಗೆ ಬಳಸುವ ಮಸಾಲೆಯನ್ನೇ ಉಪಯೋಗಿಸಿ ಎಣ್ಣೆಯಲ್ಲಿ ಕರಿದು ಚಳಿಗಾಲದಲ್ಲಿ ಊಟದಲ್ಲಿ ಮೀನಿಗೆ ಪರ್ಯಾಯವಾಗಿ ಬಳಸುತ್ತಿದ್ದರು. ಆ ಹಳ್ಳಿಯ ಜನರಿಗಷ್ಟೇ ಸೀಮಿತವಾಗಿದ್ದ ಈ ಅಡುಗೆ ಹೊರಗೆ ಗೊತ್ತಾಗಿದ್ದು ಒಂದು ಆಕಸ್ಮಿಕ. 1859ರಲ್ಲಿ ಆಸ್ಟ್ರಿಯಾ ಮತ್ತು ಫ್ರಾನ್ಸ್ ನಡುವೆ ನಡೆದ ಯುದ್ಧದಲ್ಲಿ ಈ ಭಾಗದಲ್ಲಿ ನಿಯುಕ್ತಿಗೊಂಡಿದ್ದ ಫ್ರೆಂಚ್ ಸೈನಿಕರು ಈ ಹೊಸರುಚಿಯನ್ನು ಸವಿದು ತಮ್ಮ ಊರಿಗೂ ಪರಿಚಯಿಸಿದರು. ಆ ಸಮಯದಲ್ಲಿ ಫ್ರಾನ್ಸ್ನಲ್ಲಿಯೂ ಆಲೂಗಡ್ಡೆಯನ್ನು ಅಡುಗೆಯಲ್ಲಿ ಬಳಸುವ ಪರಿಪಾಠ ಅಷ್ಟೊಂದು ಇರಲಿಲ್ಲ . ಆದರೆ ಈ ಕರಿದ ಆಲೂಗಡ್ಡೆ ನಿಧಾನವಾಗಿ ಅಲ್ಲಿನ ರೆಸ್ಟೋರೆಂಟ್, ರಸ್ತೆಬದಿಯ ತಳ್ಳುಗಾಡಿಗಳ ಮೂಲಕ ಜನರನ್ನು ತಲಪುತ್ತ ಜನಪ್ರಿಯವಾಯಿತು. ಫ್ರಾನ್ಸ್ ಮೂಲಕ ಈ ಕುರುಕಲು ತಿಂಡಿ ಬೇರೆ ದೇಶಗಳಿಗೂ ಹಬ್ಬಿದ ಕಾರಣ ಅದಕ್ಕೆ ಫ್ರೆಂಚ್ ಫ್ರೖೆ ಎಂಬ ಹೆಸರು ಬಂತು. ಹೀಗೆ ಬೆಲ್ಜಿಯಂನ ಪುಟ್ಟ ಹಳ್ಳಿಯ ಈ ತಿಂಡಿಯ ಖ್ಯಾತಿ ಬೇರ್ಯಾವುದೋ ದೇಶದ ಹೆಸರಿಗೆ ಬರೆಯುವಂತಾಯಿತು.

ಫ್ರೆಂಚ್ ಫ್ರೖೆ ಕತೆ ಇದಾದರೆ ಆಲೂಗಡ್ಡೆಯ ಭಾರತದ ನಂಟಿನ ಕಥೆ ಬೇರೆಯೇ ಇದೆ. ಪೆರು ಮೂಲದ ಆಲೂಗಡ್ಡೆಯನ್ನು ಭಾರತಕ್ಕೆ ಪರಿಚಯಿಸಿದವರು ಪೋರ್ಚುಗೀಸರು. 1500ರ ಆಸುಪಾಸಿನಲ್ಲಿ ಗೋವಾ ಮೂಲಕ ಭಾರತಕ್ಕೆ ಎಂಟ್ರಿ ಕೊಟ್ಟ ಅವರು, ಬರುವಾಗ ತಮ್ಮ ಆಹಾರ ಪದ್ಧತಿಗೆ ಅನುಗುಣವಾಗಿ ಬೇಕಾದ ತರಕಾರಿಗಳನ್ನು ಹೊತ್ತು ತಂದು ತಮ್ಮ ವಸಾಹತುಗಳಲ್ಲಿ ಬೆಳೆಸಿದರು. ಈ ಮೂಲಕ ಭಾರತದಲ್ಲಿ ಅದುವರೆಗೆ ಅಪರಿಚಿತವಾಗಿದ್ದ ಹಲವು ಹಣ್ಣು ಮತ್ತು ತರಕಾರಿಗಳು ಕಾಲಿಟ್ಟವು. ಹೀಗೆ ಪರಿಚಯಿಸಲ್ಪಟ್ಟ ತರಕಾರಿಗಳಲ್ಲಿ ಆಲೂಗಡ್ಡೆಯೂ ಒಂದು. ಆದರೆ ಈ ಹೊಸ ತರಕಾರಿಗೆ ಭಾರತದಲ್ಲಿ ಆರಂಭದಲ್ಲಿ ಅಂತಹ ಸ್ವಾಗತವೇನೂ ಸಿಗಲಿಲ್ಲ. ಹೀಗಾಗಿ ಅದು ಪ್ರಮುಖವಾಗಿ ಗೋವಾ ಮತ್ತು ಕೊಂಕಣ ಕರಾವಳಿಯ ಭಾಗಕ್ಕಷ್ಟೇ ಸೀಮಿತವಾಯಿತು. ಆದರೆ ಭಾರತದಲ್ಲಿ ಆಲೂಗಡ್ಡೆಯ ಭಾಗ್ಯ ಖುಲಾಯಿಸಿದ್ದು ಬ್ರಿಟಿಷರ ಆಗಮನದ ನಂತರ. ಬ್ರಿಟಿಷರು ಭಾರತದಲ್ಲಿ ತಮ್ಮ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯ ವಸಾಹತು ಕೇಂದ್ರವನ್ನಾಗಿ ಕೊಲ್ಕತ್ತಾವನ್ನು ಆಯ್ದುಕೊಂಡು ಅಭಿವೃದ್ಧಿಪಡಿಸಿದ ನಂತರ ಆ ಭಾಗದಲ್ಲಿ ತಮ್ಮ ಆಹಾರ ಪದ್ಧತಿಯ ಅನುಗುಣವಾಗಿ ಬೆಳೆಗಳನ್ನು ಬೆಳೆಯಲು ಆರಂಭಿಸಿದರು. ಈ ಮೂಲಕ ಆಲೂಗಡ್ಡೆ ಭಾರತದಲ್ಲಿ ಮರುಜನ್ಮ ಪಡೆಯಿತು. ಬ್ರಿಟಿಷರು ವಿದೇಶಿ ತರಕಾರಿಗಳನ್ನು ನಮ್ಮ ಮೇಲೆ ಹೇರಿ ನಮ್ಮ ಆಹಾರ ಸಂಸ್ಕೃತಿಯನ್ನು ನಾಶಪಡಿಸುವ ಹುನ್ನಾರವೂ ಇದರಲ್ಲಿತ್ತು ಎಂಬ ಆರೋಪವೂ ಇದೆ. ಅದೇನೆ ಇರಲಿ, ಬಂಗಾಲದ ಮೂಲಕ ಉತ್ತರ ಭಾರತಕ್ಕೆ ಪಸರಿಸಿದ ಆಲೂಗಡ್ಡೆ ನಿಧಾನವಾಗಿ ನಮ್ಮ ಆಹಾರದ ಮುಖ್ಯ ಭಾಗವಾಗಿ ಹೋಯಿತು.

ಅದು ಎಷ್ಟರಮಟ್ಟಿಗೆ ಎಂದರೆ ಬಂಗಾಲದ ಜನಪ್ರಿಯ ಬಾಳೆದಿಂಡಿನ ಖಾದ್ಯ ಮೊಚಾರ್ ಘೊಂಟೊ ಆಲೂಗಡ್ಡೆಯನ್ನು ತನ್ನ ಜೊತೆ ಸೇರಿಸಿಕೊಂಡು ಅಪ್​ಡೇಟ್ ಆಯಿತು. ಮಾಂಸಾಹಾರಿಗಳು ಕೊಲ್ಕೊತ್ತಾದ ಬಿರ್ಯಾನಿ ಸವಿದಿದ್ದರೆ ಅದರಲ್ಲಿ ಆಲೂಗಡ್ಡೆಯ ಉಪಸ್ಥಿತಿಯನ್ನು ಖಂಡಿತ ಗಮನಿಸಿರುತ್ತೀರಿ. ಇದೇ ಮಾತು ಅಲ್ಲಿನ ಕೆಲವು ಮೀನಿನ ಖಾದ್ಯಗಳಿಗೂ ಅನ್ವಯವಾಗುತ್ತದೆ. ಆಲೂ ಪರೋಟಾ, ದಮ್ ಆಲೂ, ಬಟಾಟೆ ಭಾಜಿ ಇವೆಲ್ಲ ಭಾರತೀಯ ಖಾದ್ಯಗಳ ಪಟ್ಟಿಯಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರುವ ತಿನಿಸುಗಳು. ಇಲ್ಲಿ ಗಮನಿಸಬೇಕಾಗಿರುವ ಮತ್ತೊಂದು ಸಂಗತಿಯೆಂದರೆ ಭಾರತದಲ್ಲಿ ನಾವು ಆಲೂಗಡ್ಡೆಗೆ ಕರೆಯುವ ಹೆಸರುಗಳು. ಅಮೆರಿಕ ಮೂಲದ ಮತ್ತು ಅಲ್ಲಿ ಹೆಚ್ಚು ಬಳಸುವ ಸಿಹಿಗೆಣಸಿನ ಹೆಸರು ಇಪೊಮೊ ಬಟಾಟ. ಹೀಗಾಗಿ ಈ ಹೆಸರು ಆಲೂಗಡ್ಡೆಗೂ ಅಂಟಿಕೊಂಡಿತು. ಪೋರ್ಚುಗೀಸ್​ನಲ್ಲಿಯೂ ಇದರ ಹೆಸರು ಬಟಾಟ. ಹೀಗಾಗಿ ಪೋರ್ಚುಗೀಸರ ಮೂಲಕ ಭಾರತ ಪ್ರವೇಶಿಸಿದ ಈ ತರಕಾರಿ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕವೂ ಸೇರಿದಂತೆ ಕೊಂಕಣ ಪ್ರದೇಶದಲ್ಲಿ ಪೋರ್ಚುಗೀಸರಿಂದ ಹೆಸರನ್ನೂ ಬಳುವಳಿಯಾಗಿ ಪಡೆದು ಬಟಾಟೆಯೆಂದೇ ಕರೆಯಲ್ಪಡುತ್ತದೆ. ಆಲೂ ಎಂಬುದಕ್ಕೆ ಸಂಸ್ಕೃತ ಮತ್ತು ಪ್ರಾಕೃತದಲ್ಲಿ ಗೆಡ್ಡೆ ಎಂದು ಅರ್ಥ. ಹೀಗಾಗಿ ಅದು ಆ ಭಾಷೆಗಳಿಂದ ಎರವಲು ಪಡೆದು ಕನ್ನಡ ಮತ್ತು ಹಿಂದಿಯೂ ಸೇರಿದಂತೆ ಉಳಿದ ಭಾರತೀಯ ಭಾಷೆಗಳಲ್ಲಿ ಬಳಸಲ್ಪಡುತ್ತಿದೆ.

ಭಾರತದಲ್ಲಿ ಅತಿ ಹೆಚ್ಚು ಆಲೂಗಡ್ಡೆ ಬೆಳೆಯುವ ರಾಜ್ಯ ಉತ್ತರಪ್ರದೇಶ. ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಲ, ಬಿಹಾರ ಮತ್ತು ಗುಜರಾತ್ ಇವೆ. ನಮ್ಮಲ್ಲಿ ಬೆಳೆಯುವ ಆಲೂಗಡ್ಡೆಗಳಲ್ಲಿ ಹಲವು ತಳಿಗಳಿದ್ದು ಕರ್ನಾಟಕವೂ ಸೇರಿ ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಹೆಚ್ಚು ಬೆಳೆಯುವ ಮಧ್ಯಮ ಗಾತ್ರದ ಕುಫ್ರಿ ಸಿಂಧೂರಿ ಹೆಚ್ಚು ಜನಪ್ರಿಯವಾಗಿದೆ. ಕುಫ್ರಿ ಚಂದ್ರಮುಖಿ ತಳಿಯು ಗಾತ್ರದಲ್ಲಿ ದೊಡ್ಡದಾಗಿದ್ದು ಉತ್ತರ ಭಾರತದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಚಿಪ್ಸ್ ತಯಾರಿಕೆಗೆ ಈ ತಳಿ ಹೆಚ್ಚು ಸೂಕ್ತ. ಇವೆಲ್ಲವುಗಳಿಗಿಂತ ಹೆಚ್ಚು ಬಿಳಿಯ ಮೇಲ್ಮೈಯನ್ನು ಹೊಂದಿರುವ ಕುಫ್ರಿ ಜ್ಯೋತಿ ತಳಿ ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಮತ್ತೊಂದು ತಳಿ.

ಮತ್ತೆ ಫ್ರೆಂಚ್ ಫ್ರೖೆ ವಿಷಯಕ್ಕೆ ಬರೋಣ. ಭಾರತಕ್ಕೂ ಈ ವಿದೇಶದಿಂದ ಆಮದಾದ ಆಲೂಗಡ್ಡೆಗೂ ಅದೇನು ಸಾರಾವಳಿಯೋ ಗೊತ್ತಿಲ್ಲ. ಸ್ಟಾರ್ ಹೋಟೆಲ್​ಗಳಲ್ಲಿ ಹೈ ಕ್ಲಾಸ್ ಗಿರಾಕಿಗಳನ್ನು ಸೆಳೆಯಲು ವಿದೇಶದಿಂದ ಆಮದಾಗುತ್ತಿದ್ದ ಫ್ರೆಂಚ್ ಫ್ರೖೆ ಉತ್ಪಾದನೆ ಮತ್ತು ರಫ್ತು ಎರಡರಲ್ಲೂ ಭಾರತವೀಗ ನಂಬರ್ ಒನ್. 1992ರಲ್ಲಿ ಭಾರತಕ್ಕೆ ಕಾಲಿಟ್ಟ ಈ ವಿದೇಶಿ ಕುರುಕಲು ತಿಂಡಿಯನ್ನು ಲ್ಯಾಂಬ್ ವೇಸ್ಟನ್ ಎನ್ನುವ ಖಾದ್ಯ ಸರಬರಾಜು ಸಂಸ್ಥೆ ಆಮದು ಮಾಡಿಕೊಳ್ಳುತ್ತಿತ್ತು. ತದನಂತರ 1996ರಲ್ಲಿ ಮೆಕ್​ಡೊನಾಲ್ಡ್ ಸಂಸ್ಥೆ ತನ್ನ ಮಳಿಗೆಗಳ ಮೂಲಕ ಭಾರತದಾದ್ಯಂತ ಫ್ರೆಂಚ್ ಫ್ರೖೆಯನ್ನು ಮತ್ತಷ್ಟು ಜನರಿಗೆ ಹತ್ತಿರವಾಗಿಸಿತು. 2000ನೇ ಇಸವಿಯವರೆಗೆ ಭಾರತದ ಫ್ರೆಂಚ್ ಫ್ರೖೆ ಆಮದು ಐದು ಸಾವಿರ ಟನ್​ಗೆ ಏರಿ 2011ರಲ್ಲಿ ಎಂಟು ಸಾವಿರ ಟನ್ ಗಡಿ ತಲುಪಿತು. ಇಷ್ಟೊಂದು ವೇಗವಾಗಿ ಭಾರತದಲ್ಲಿ ಜನಪ್ರಿಯತೆ ಕಂಡುಕೊಂಡ ಈ ಕುರುಕಲು ತಿಂಡಿ ಭಾರತದ ಆಮದು ಬಿಲ್​ಅನ್ನು ಈ ಪಾಟಿ ಏರಿಸುತ್ತಿರುವುದನ್ನು ಕಂಡು ಈ ಆಲೂಗಡ್ಡೆಗಳನ್ನು ನಮ್ಮಲ್ಲೇ ಬೆಳೆಸುವ ಯೋಚನೆಯೊಂದು ಹೊಳೆದಿದ್ದೇ ಮುಂದೊಂದು ಕ್ರಾಂತಿಯನ್ನು ಹುಟ್ಟುಹಾಕಿತು.

ಆಲೂಗಡ್ಡೆಯ ಉತ್ಪಾದನೆಯಲ್ಲಿ ಜಾಗತಿಕವಾಗಿ ಮೊದಲ ಐದು ದೇಶಗಳ ಸಾಲಿನಲ್ಲಿ ನಿಲ್ಲುವ ಭಾರತಕ್ಕೆ ಇಷ್ಟೊಂದು ಫ್ರೆಂಚ್ ಫ್ರೖೆಯನ್ನು ಆಮದು ಮಾಡಿಕೊಳ್ಳುವ ದರ್ದು ಏಕಿತ್ತು ಎಂಬ ಪ್ರಶ್ನೆ ಇಲ್ಲಿ ಮೂಡುವುದು ಸಹಜ. ನಮ್ಮಲ್ಲಿ ಬೆಳೆಯುವ ಮತ್ತು ಬಳಸುವ ಆಲೂಗಡ್ಡೆಗಳಲ್ಲಿ ನೀರು ಮತ್ತು ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ಕರಿದಾಗ ಅವು ಬಲುಬೇಗ ಸುಡುವುದಲ್ಲದೇ ಬಣ್ಣವೂ ಸಹ ಪೇಲವವಾಗಿರುತ್ತದೆ. ಹೀಗಾಗಿ ಕಡಿಮೆ ನೀರು ಮತ್ತು ಸಕ್ಕರೆಯಂಶದ ಜೊತೆಗೆ ಹೆಚ್ಚಿನ ಪಿಷ್ಟದ ಪ್ರಮಾಣವನ್ನು ಹೊಂದಿರುವ ಸಾಂಟಾನ, ಇನೋವೇಟರ್, ಕೆನೆಬೆಕ್​ನಂತಹ ವಿದೇಶಿ ತಳಿಗಳನ್ನು ಫ್ರೆಂಚ್ ಫ್ರೖೆ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಫ್ರೆಂಚ್ ಫ್ರೖೆಗೆ ಬೇಡಿಕೆ ಹೆಚ್ಚಿದಂತೆ ಈ ವಿದೇಶಿ ತಳಿಗಳನ್ನು ಭಾರತದಲ್ಲೂ ಬೆಳೆಯುವ ಪರಿಪಾಠ ಶುರುವಾಯಿತು. ಫ್ರೆಂಚ್ ಫ್ರೖೆ ತಯಾರಿಕೆಯ ಬೇಕುಗಳನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆಯ ಬೇಡಿಕೆಗೆ ಮತ್ತು ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಶಿಮ್ಲಾದ ಆಲೂಗಡ್ಡೆ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದ ಕುಫ್ರಿ ಫ್ರೖೆಸೋನಾ ಮತ್ತು ಕುಫ್ರಿ ಫ್ರೖೆ ಓಂ ತಳಿಗಳು ಇದೀಗ ವಿದೇಶಿ ತಳಿಗಳಿಗೆ ಪೈಪೋಟಿ ನೀಡುತ್ತಿದ್ದು ರೈತರ ಮನ ಗೆದ್ದಿವೆ.

ಇವೆಲ್ಲವುಗಳ ಜೊತೆಗೆ ಗುತ್ತಿಗೆ ಕೃಷಿಯ ಟ್ರೆಂಡು ಇದೀಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಅದರನ್ವಯ ಖರೀದಿದಾರ ಮತ್ತು ರೈತರ ನಡುವೆ ಒಪ್ಪಂದವೇರ್ಪಟ್ಟು ಖರೀದಿದಾರ ಪೂರೈಸಿದ ತಳಿಗಳನ್ನು ತಾಂತ್ರಿಕ ಸಲಹೆಗಾರರ ನಿರ್ದೇಶನದಂತೆ ರೈತರು ಬೆಳೆಯನ್ನು ಬೆಳೆದು ಪೂರ್ವನಿರ್ಧಾರಿತ ದರದ ಪ್ರಕಾರ ಖರೀದಿದಾರ ರೈತನಿಂದ ಖರೀದಿಸುತ್ತಾನೆ. ಇದೂ ಸಹ ಭಾರತದಲ್ಲಿ ಫ್ರೆಂಚ್ ಫ್ರೖೆ ಉತ್ಪಾದನೆ ಹೆಚ್ಚಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಭಾರತದಲ್ಲಿ ತಯಾರಾದ ಫ್ರೆಂಚ್ ಫ್ರೖೆ ಫಿಲಿಪೈನ್ಸ್, ಥಾಯ್ಲೆಂಡ್, ಇಂಡೋನೇಷ್ಯಾ ಸೇರಿದಂತೆ ಜಗತ್ತಿನಾದ್ಯಂತ ರಫ್ತಾಗುತ್ತಿದ್ದು ಗುಣಮಟ್ಟದಲ್ಲೂ ಅತ್ಯುತ್ತಮವೆಂದು ಹೆಸರು ಗಳಿಸಿದೆ. ಚೀನಾವನ್ನು ಹಿಂದಿಕ್ಕಿ ಜಗತ್ತಿನ ನಂಬರ್ 1 ಫ್ರೆಂಚ್ ಫ್ರೖೆ ರಫ್ತುದಾರನೆಂಬ ಭಾರತದ ಯಶಸ್ಸಿನ ಹಿಂದೆಯೇ ಈ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಚಟುವಟಿಕೆಗಳ ಕಾರಣ ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಯುವಕರು ಕೃಷಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಮತ್ತೆ ಊರಿನತ್ತ ಮುಖ ಮಾಡುತ್ತಿದ್ದಾರೆ. ಸಾಗಾಣಿಕೆ ಮತ್ತು ಸಂಗ್ರಹದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರೆ ಇದನ್ನು ದೇಶಾದ್ಯಂತ ವಿಸ್ತರಿಸುವ ಅವಕಾಶವಿದೆ. ನಮ್ಮ ಚಿಂತಕರ ಚಾವಡಿಯು ಮನಸ್ಸು ಮಾಡಬೇಕಷ್ಟೇ.

(ಲೇಖಕರು ವಿಜ್ಞಾನ; ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net