

ಮುಂಬೈ: ಮಹಾರಷ್ಟ್ರ ಸರ್ಕಾರ ಪತನಕ್ಕೆ ಮುನ್ನುಡಿ ಬರೆದ ಬಂಡಾಯ ಶಾಸಕರು, ಏಕನಾಥ್ ಶಿಂಧೆ ಅವರೇ ನಮ್ಮ ನಾಯಕ ಎಂದು ಘೋಷಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ನಡೆಯಲಿರುವ ಕ್ಯಾಬಿನೆಟ್ ಸಭೆಗೆ ಎಲ್ಲ ಶಾಸಕರು ಹಾಜರಾಗಬೇಕು ಎಂದು ಉದ್ಧವ್ ಠಾಕ್ರೆ ವಿಪ್ ಜಾರಿ ಮಾಡುತ್ತಿದ್ದಂತೆ ಕೆರಳಿದ ಶಿಂಧೆ, 34 ರೆಬಲ್ ಶಾಸಕರಿಂದ ಸಹಿ ಮಾಡಿಸಿ ಪತ್ರ ರವಾನಿಸಿದ್ದಾರೆ.
ನಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಅಧಿಕಾರ ಠಾಕ್ರೆಗೆ ಇಲ್ಲ. ವಿಪ್ ಜಾರಿ ಮಾಡಿದ್ದು ಅಸಿಂಧು. ನನ್ನ ಬಳಿಯೂ ಶಾಸಕರಿದ್ದಾರೆ ಎಂದು ಏಕನಾಥ್ ಶಿಂಧೆ ಆಕ್ರೋಶ ಹೊರಹಾಕಿದ್ದಾರೆ. ‘
ರೆಬಲ್ ಶಾಸಕರನ್ನು ಸೆಳೆಯಲು ಉದ್ಧವ್ ಠಾಕ್ರೆ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದು, ಫಲಿಸದಿದ್ದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಸಾಧ್ಯತೆ ಇದೆ. ಸರ್ಕಾರ ಉಳಿಸಿಕೊಳ್ಳಲು ಕೊನೇ ಹಂತದ ಸರ್ಕಸ್ ನಡೆಯುತ್ತಿದ್ದು, ಇಂದು ಸಂಜೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರದ ಭವಿಷ್ಯ ಏನೆಂದು ಗೊತ್ತಾಗಲಿದೆ.