

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಂಪರೆಗೆ ದೊಡ್ಡ ಕೊಡುಗೆಯಾದ ವಚನಗಳನ್ನು ಸಂರಕ್ಷಿಸುವ ಜತೆಗೆ ಕನ್ನಡ ಸಂಸ್ಕೃತಿಯನ್ನು ಉಳಿಸಲು ತಮ್ಮ ಜೀವನ ಮುಡಿಪಾಗಿಟ್ಟ ಡಾ. .ಗು.ಹಳಕಟ್ಟಿ ಅವರ ಮೌಲ್ಯಗಳನ್ನು ನಾವು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ಬುಧವಾರ ಆಯೋಜಿಸಿದ್ದ ಡಾ. .ಗು.ಹಳಕಟ್ಟಿ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ವಚನಗಳ ಸಂರಕ್ಷಣೆ ಮೂಲಕ ಕನ್ನಡದ ಅಸ್ಮಿತೆ ಕಾಪಾಡಿರುವ ಹಳಕಟ್ಟಿ ಅತ್ಯಂತ ಮೌಲಿಕ ಜೀವನ ನಡೆಸಿದ್ದರು ಎಂದರು.
ಮಹಾಕಾವ್ಯಗಳು, ರಗಳೆ, ಚಂಪೂ ಕಾವ್ಯ ಇತರೆ ಪ್ರಕಾರದ ಕಾವ್ಯಗಳಿಗೆ ಸೀಮಿತವಾಗಿದ್ದ ಸಮಯದಲ್ಲಿ ಸಾಮಾನ್ಯ ಜನತೆಗೆ ಅರ್ಥವಾಗುವಂತೆ ರಚಿಸಲಾದ ವಚನಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ತಿರುವು ನೀಡಿದವು. ಇಂತಹ ವಚನ ಸಾಹಿತ್ಯವನ್ನು ಸಂರಕ್ಷಿಸುವ ಕೆಲಸವನ್ನು ಮಾಡುವಲ್ಲಿ ನಾಲ್ಕನೇ ಕಾಲಘಟ್ಟಕ್ಕೆ ಸೇರಿದ .ಗು.ಹಳಕಟ್ಟಿ ಪಾತ್ರ ಅಸಾಧಾರಣವಾದುದು ಎಂದು ತಿಳಿಸಿದರು.
ವಚನ ಸಾಹಿತ್ಯ ಸಂಗ್ರಹ, ಸಂಪಾದನೆ ಮತ್ತು ಮುದ್ರಣ ಅವರ ಜೀವನದ ಮುಖ್ಯ ಧ್ಯೇಯವಾಗಿತ್ತು. ಅವರಲ್ಲಿ ಆಸೆ, ಭಯ ಇರಲಿಲ್ಲ, ನಿರಾಪೇಕ್ಷ ಭಾವದ ಅವರು ಸತ್ಯದ ಅರಿವು ಮೂಡಿಸಿಕೊಂಡು ಜ್ಞಾನದ ಪರಮಾನಂದದಲ್ಲಿ ಇದ್ದರು. ಎಂತಹ ಕಠಿಣ ಸಂದರ್ಭದಲ್ಲೂ ಸ್ವಾರ್ಥಿಗಳಾಗದೆ ವಚನ ಸಂರಕ್ಷಣಾ ಕಾರ್ಯ ಮುಂದುವರಿಸಿದರು ಎಂದು ಹೇಳಿದರು.
ಪ್ರತಿಭಾವಂತ ವಕೀಲರಾಗಿದ್ದ ಹಳಕಟ್ಟಿ ಅವರು ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಸಹಕಾರ, ನೇಕಾರಿಕೆ ಸೇರಿ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿದರು. ಅಂದಿನ ಬಿಜಾಪುರ ನಗರಸಭೆ ಅಧ್ಯಕ್ಷರಾಗಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದರು. ಮರಾಠಿ, ಉರ್ದುಮಯವಾದ ಭಾಗದಲ್ಲಿ ಕನ್ನಡ ಶಾಲೆಗಳನ್ನು ತೆರೆದರು ಎಂದು ವಿವರಿಸಿದರು.
ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಮುಂತಾದವರಿದ್ದರು.