ಚೆಲುವನಾರಾಯಣಸ್ವಾಮಿಗೆ ಶೇರ್ತಿ ಸೇವೆ

14mlk3
ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಗೆ ಶ್ರೀಕೃಷ್ಣ-ಬಲರಾಮರು ದ್ವಾಪರಯುಗದಲ್ಲಿ ಆರಾಧಿಸಿದ ಪ್ರತೀಕವಾಗಿ ಸೋಮವಾರ ಶೇರ್ತಿಸೇವೆ ವೈಭವದಿಂದ ನೆರವೇರಿತು.
Published on

ಮೇಲುಕೋಟೆ: ಯದುಗಿರಿಯ ಅದಿವೈವ ಚೆಲುವನಾರಾಯಣಸ್ವಾಮಿಯನ್ನು ಶ್ರೀಕೃಷ್ಣ-ಬಲರಾಮರು ದ್ವಾಪರಯುಗದಲ್ಲಿ ಆರಾಧಿಸಿದ ಪ್ರತೀಕವಾಗಿ ಸೋಮವಾರ ಶೇರ್ತಿ ಸೇವೆ ವೈಭವದಿಂದ ನೆರವೇರಿತು. ಸಹಸ್ರಾರು ಭಕ್ತರು ವಿಶೇಷ ಕ್ಷಣಗಳನ್ನು ಕಣ್ತುಂಬಿಕೊಂಡರು.

ಶ್ರೀಕೃಷ್ಣ-ಬಲರಾಮರು ದ್ವಾಪರ ಯುಗದಲ್ಲಿ ತಾವು ನಿತ್ಯ ಆರಾಧಿಸುತ್ತಿದ್ದ ಉತ್ಸವಮೂರ್ತಿಯನ್ನು ಯದುಗಿರಿಯ ದೇವಾಲಯಕ್ಕೆ ತಂದು ಮೂಲಮೂರ್ತಿಯೊಡನೆ ಪೂಜೆ ಮಾಡಲು ಬ್ರಹ್ಮೋತ್ಸವ ನಡೆಸಲು ಅರ್ಪಿಸಿದರು ಎಂಬ ಪ್ರತೀತಿ ಇದ್ದು, ವರ್ಷಕ್ಕೊಂದು ದಿನ ಮಾತ್ರ ಮೂಲಮೂರ್ತಿಯೊಡನೆ ಉತ್ಸವಮೂರ್ತಿಯನ್ನು ಬ್ರಹ್ಮೋತ್ಸವ ಮುಗಿದ ಮರುದಿನ ಆರಾಧಿಸಲಾಗುತ್ತಿದ್ದು ಸೋಮವಾರ ಶೇರ್ತಿ ಸೇವೆ ನಡೆಸಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ವೈರಮುಡಿ ಬ್ರಹ್ಮೋತ್ಸವದಲ್ಲಿ ಭಾಗವಹಿಸಿದ ಭಕ್ತರಿಗೆ ಕೊನೆಯದಿನ ಸಿಹಿಯೊಂದಿಗೆ ಅನ್ನಪ್ರಸಾದ ನೀಡುವ ವಿಶಿಷ್ಠ ಅನ್ನಕೋಟಿ ಅಥವಾ ಮಹಾನಿವೇದನ ಅರ್ಥಪೂರ್ಣವಾಗಿ ನೆರವೇರಿತು. ಪಂಚಾಮೃತ, ಕ್ಷೀರ ಹಾಗೂ ಕದಂಬವನ್ನು ತಯಾರಿಸಿ ಚೆಲುವನಾರಾಯಣನಿಗೆ ಮಹಾನಿವೇದನ ಮಾಡಿ ನೆರೆದಿದ್ದ ಸಹಸ್ರಾರು ಭಕ್ತರಿಗೆ ವಿತರಿಸಲಾಯಿತು.

ಇದೇ ದಿನ ಬೆಟ್ಟದೊಡೆಯ ಶ್ರೀ ಯೋಗನರಸಿಂಹಸ್ವಾಮಿ ಹಾಗೂ ಮಹಾಲಕ್ಷ್ಮೀ ಯದುಗಿರಿನಾಯಕಿ ಅಮ್ಮನವರಿಗೆ ವೈರಮುಡಿ ಬ್ರಹ್ಮೋತ್ಸವ ಮುಕ್ತಾಯದ ಅಂಗವಾಗಿ ವೇದಮಂತ್ರಗಳೊಂದಿಗೆ ವೈಭವದಿಂದ ಮಹಾಭಿಷೇಕ ನೆರವೇರಿತು. ನೂರಾರು ಸಂಖ್ಯೆಯ ಭಕ್ತರು ಮಹಾಭಿಷೇಕದಲ್ಲಿ ಭಾಗವಹಿಸಿ ದರ್ಶನಪಡೆದರು.

ರಾಜಮುಡಿ ಮರಳಿ ಖಜಾನೆಗೆ: ಏ.7ರ ವೈರಮುಡಿ ಉತ್ಸವದಿಂದ ಪಟ್ಟಾಭಿಷೇಕ ಮಹೋತ್ಸವದವರೆಗೆ ಏಳು ದಿನಗಳವರೆಗೆ ಜಾತ್ರಾ ಅವಧಿಯಲ್ಲಿ ಚೆಲುವನಾರಾಯಣಸ್ವಾಮಿಯನ್ನು ವಿವಿಧ ಉತ್ಸವಗಳಲ್ಲಿ ಅಲಂಕರಿಸಿದ್ದ ರಾಜಮುಡಿ ಮತ್ತು ಇತರ ವಜ್ರಖಚಿತ ಆಭರಣಗಳನ್ನು ಜಿಲ್ಲಾ ಖಜಾನೆಗೆ ಕಳುಹಿಸಿಕೊಡಲಾಯಿತು. ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಕಿರೀಟ ಮತ್ತು ಆಭರಣಗಳನ್ನು ಪರಿಶೀಲಿಸಿದ ನಂತರ ಸ್ಥಾನಿಕರು ಮತ್ತು ಅರ್ಚಕ ಪರಿಚಾರಕರಿಂದ ಪಡೆದು ಮೊಹರು ಮಾಡಿ ಪೊಲೀಸ್ ಭದ್ರತೆಯೊಂದಿಗೆ ಖಜಾನೆಗೆ ಮರಳಿಸಲಾಯಿತು ಈ ವೇಳೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಸ್ಥಾನಿಕರಾದ ಶ್ರೀನಿವಾಸ ನರಸಿಂಹನ್ ಗುರೂಜಿ, ಕರಗಂರಾಮಪ್ರಿಯ, ತಿರುನಾರಾಯಣ ಅಯ್ಯಂಗಾರ್, ಮುಕುಂದನ್, ಶ್ರೀರಾಮನ್ ಅರ್ಚಕ ವರದರಾಜ ಭಟ್ಟರ್, ಪರಿಚಾರಕ ಎಂ.ಎನ್.ಪಾರ್ಥಸಾರಥಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net