ಕಸದ ತೊಟ್ಟಿಯಾದ ಮರದ ಬುಡ

25-06-25--krs3 (2)
ಕೃಷ್ಣರಾಜಸಾಗರ ಬೃಂದಾವನದಲ್ಲಿನ ದೋಣಿ ವಿಹಾರ ಕೇಂದ್ರ ಬಳಿ ಕಳೆದ ಮೂರು ವರ್ಷಗಳ ಹಿಂದೆ ಬಿದ್ದ ಮರದ ಬುಡವನ್ನು ತೆರುವಗೊಳಿಸದೆ ಕಸದ ತೊಟ್ಟಿಯಾಗಿರುವುದು.
Published on

ಕೆ.ಆರ್.ಸಾಗರ: 100 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಆರತಿ ಯೋಜನೆ ಮಾಡಲು ಹೊರಟಿರುವ ರಾಜ್ಯ ಸರ್ಕಾರ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಬೃಂದಾವನದಲ್ಲಿನ ದೋಣಿ ವಿಹಾರ ಕೇಂದ್ರದ ಮುಂಭಾಗದಲ್ಲಿ ಮರ ಬಿದ್ದು ಮೂರು ವರ್ಷ ಕಳೆದರೂ ಅದನ್ನು ತೆರವುಗೊಳಿಸದೆ ಕಾವೇರಿ ನೀರಾವರಿ ನಿಗಮ ನಿರ್ಲಕ್ಷೃ ತೋರಿದ ಕಾರಣ ಬೃಂದಾವನದ ಅಂದಗೆಡಿಸಿದೆ.

ಮೂರು ವರ್ಷಗಳ ಹಿಂದೆ ಭಾರಿ ಮಳೆ-ಗಾಳಿಗೆ ಬೃಂದಾವನದಲ್ಲಿ ಹಲವು ಮರ-ಗಿಡಗಳು ನೆಲಕ್ಕುರುಳಿದ್ದವು. ಆ ಸಂದರ್ಭದಲ್ಲಿ ದೋಣಿ ವಿಹಾರ ಕೇಂದ್ರದ ಮುಂಭಾಗ ಮರ ಬಿದ್ದಾಗ ಅಲ್ಲಿನ ಮರದ ಕೊಂಬೆಗಳನ್ನು ಮಾತ್ರ ತೆರವುಗೊಳಿಸಲಾಗಿತ್ತು. ನಂತರ ಅದರ ದೊಡ್ಡದಾದ ಬುಡವನ್ನು ಅಲ್ಲಿಯೇ ಬಿಟ್ಟ ಕಾರಣ ಅಲ್ಲಿ ಪ್ರವಾಸಿಗರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಮರದ ಬುಡ ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು, ಇದೀಗ ಕಸ ತುಂಬಿ ತುಳುಕುತ್ತಿದೆ. ಇದೇ ರೀತಿ ಬೃಂದಾವನದಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಮರದ ಕೊಂಬೆಗಳನ್ನು ಅರಣ್ಯ ಇಲಾಖೆಯವರು ಕತ್ತರಿಸಿ ಹಲವು ದಿನಗಳು ಕಳೆದರೂ ತೆರವುಗೊಳಿಸದೆ ಇರುವ ಬಗ್ಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಅಧಿಕಾರಿಗಳ ನಿರ್ವಹಣೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮರದ ಬುಡದ ಕೆಳಗೆ ಕಸ ತೆರವುಗೊಳಿಸಿ ಸ್ವಚ್ಛತೆ ಕಾಪಾಡಲಿ ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net