ಸ್ಟಾಕ್ ಮಾರ್ಕೆಟ್ ವಂಚಕರು ಇಡಿ ಬಲೆಗೆ

New Cyber Crime New
Published on

ಬೆಂಗಳೂರು: ಆ್ಯಪ್‌ನಲ್ಲಿ ಷೇರು ಮಾರ್ಕೆಟ್‌ಗೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದ ನಾಲ್ವರು ಸೈಬರ್ ಕಳ್ಳರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.

ಬೆಂಗಳೂರಿನ ಎಂ. ಶಶಿಕುಮಾರ್ (25), ಎಂ.ಸಚಿನ್ (26), ಎಸ್.ಕೆ. ಕಿರಣ್ (25) ಮತ್ತು ಸಿ. ಚರಣ್ ರಾಜ್ (26) ಬಂಧಿತರು. 25 ಕೋಟಿ ರೂ. ಮೌಲ್ಯದ ನಗದು, ಮೊಬೈಲ್, ಡಿಜಿಟಲ್ ಸಾಕ್ಷ್ಯ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸೋಮವಾರ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿ ಏಳು ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್‌ಸ್ಟಾ ಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಮಾಯಕರಿಗೆ ಬಲೆಬೀಸಿ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಜಾಹೀರಾತು ನೀಡುತ್ತಿದ್ದರು. ಲಿಂಕ್ ಮೇಲೆ ಕ್ಲಿಕ್ ಮಾಡುವರ ಮೊಬೈಲ್ ನಂಬರ್‌ನ್ನು ಟೆಲಿಗ್ರಾಂ ಅಥವಾ ವಾಟ್ಸ್‌ಆ್ಯಪ್ ಗ್ರೂಪ್ ಸದಸ್ಯರಾಗಿ ಮಾಡಿಕೊಳ್ಳುತ್ತಿದ್ದರು. ಬಳಿಕ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಸಿ ಅದರಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನ ನೀಡುತ್ತಿದ್ದರು. ಹೂಡಿಕೆ ಮಾಡಿದ ಹಣ ದೋಚುತ್ತಿದ್ದ ಸೈಬರ್ ಕಳ್ಳರು, ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡುತ್ತಿದ್ದರು. ಆದರಿಂದ ಬಂಧಿತರ ವಿರುದ್ಧ ಮನಿ ಲಾಂಡರಿಂಗ್ ಆಕ್ಟ್-2002ರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.

ಇದೇ ರೀತಿಯಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಹಲವು ಎ್ಐಆರ್ ದಾಖಲಾಗಿವೆ. ಹರಿಯಾಣದ ರಿದಾಬಾದ್‌ನ ಯುವಕನೊಬ್ಬ, ನಕಲಿ ಆ್ಯಪ್‌ನಲ್ಲಿ ಷೇರು ಮಾರ್ಕೆಟ್‌ನಲ್ಲಿ 7.59 ಕೋಟಿ ರೂ. ಹೂಡಿಕೆ ಮಾಡಿದ್ದರು. ವಾಟ್ಸ್‌ಆ್ಯಪ್‌ನಲ್ಲಿ ವಿವಿಧ ಗ್ರೂಪ್‌ಗೆ ಯುವಕನನ್ನು ಸದಸ್ಯನಾಗಿ ಮಾಡಿಕೊಂಡು ಅದರಲ್ಲಿ ಆಮಿಷವೊಡ್ಡಿ ಹೂಡಿಕೆ ಮಾಡಿಕೊಂಡು ವಂಚಿಸಿದ್ದರು.

ಇದೇ ರೀತಿಯಾಗಿ ಉತ್ತರ ಪ್ರದೇಶದ ನೋಯ್ಡ ಮೂಲದ ವ್ಯಕ್ತಿಯಿಂದ 9.09 ಕೋಟಿ ರೂ. ಮತ್ತು ಪಂಜಾಬ್‌ನ ಬಟಿಂಡಾ ಮೂಲದ ವ್ಯಕ್ತಿಯಿಂದ 5.93 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದರು. ಇದೇ ರೀತಿಯಾಗಿ ದೇಶದ ವಿವಿಧೆಡೆ ವಂಚನೆ ಮಾಡಿರುವ ಸಂಬಂಧ ಎ್ಐಆರ್‌ಗಳು ದಾಖಲಾಗಿರುವುದು ಬೆಳಕಿಗೆ ಬಂದಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಜಾಲತಾಣವೇ ವೇದಿಕೆ :

ಇನ್‌ಸ್ಟಾ ಗ್ರಾಂ, ವಾಟ್ಸ್‌ಆ್ಯಪ್, ಟೆಲಿಗ್ರಾಂ ವೇದಿಕೆಯಲ್ಲಿ ಸ್ಟಾಕ್ ಮಾರ್ಕೆಟ್ ಕುರಿತು ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಬಳಿಕ ನಕಲಿ ಗ್ರೂಪ್‌ಗಳನ್ನು ಮಾಡಿ ಅದರಲ್ಲಿ ಪ್ರತಿಷ್ಠಿತ ಬ್ಯಾಂಕ್ ಹೆಸರು ನಾಮಕರಣ ಮಾಡಿ ಸೆಳೆಯುತ್ತಾರೆ. ಗ್ರೂಪ್ ಸದಸ್ಯರಿಗೆ ನಕಲಿ ಆ್ಯಪ್‌ಗಳ ಲಿಂಕ್ ಕಳುಹಿಸಿ ರಿಲಿಯನ್ಸ್, ಟಾಟಾ ಪವರ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ಹೆಸರಿಟ್ಟು ಹೂಡಿಕೆಗೆ ಮಾಡಿಸಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾದ ಮೇಲೆ ವಿತ್ ಡ್ರಾ ಮಾಡಿಕೊಳ್ಳುತ್ತಿದ್ದರು.

ಆ್ಯಪ್‌ಗಳ ಡ್ಯಾಸ್‌ಬೋರ್ಡ್‌ನಲ್ಲಿ ಲಾಭಾಂಶದ ಅಂಕಿಅಂಶ ಪ್ರದರ್ಶನ ಮಾಡಿ ಉತ್ತೇಜನ ನೀಡುತ್ತಿದ್ದರು. ಆದರೆ, ವಿತ್ ಡ್ರಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಡ್ರಾ ಮಾಡಲು ಮುಂದಾಗವ ಜನರಿಂದ ಮತ್ತೆ ತೆರಿಗೆ ರೂಪದಲ್ಲಿ ಹಣ ವಸೂಲಿ ಮಾಡುತ್ತಿದ್ದರು.

ನಕಲಿ ಸಿಮ್ ಮಾರಾಟ ದಂಧೆ :

ಟೆಲಿಗ್ರಾಂ ಗ್ರೂಪ್‌ನಲ್ಲಿ ಅಕ್ರಮವಾಗಿ ಸಿಮ್ ಕಾರ್ಡ್ ಮಾರಾಟಗಾರರನ್ನು ಸಂಪರ್ಕ ಮಾಡಿ ಸಿಮ್ ಆಕ್ಟೀವ್ ಮಾಡಿಸಿ ವಿದೇಶಕ್ಕೆ ರವಾನೆ ಮಾಡುತ್ತಿದ್ದರು. ಈ ಸಿಮ್ ಬಳಸಿ ನಕಲಿ ಕಂಪನಿ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆದು ಹಣಕಾಸಿನ ವಹಿವಾಟಿಗೆ ದಾರಿ ಮಾಡಿಕೊಳ್ಳುತ್ತಿದ್ದರು. ಬ್ಯಾಂಕ್‌ಗಳಿಗೂ ನಕಲಿ ದಾಖಲೆ ಸಲ್ಲಿಸಿ ಖಾತೆ ತೆರೆದಿದ್ದು, ನಕಲಿ ಕಂಪನಿಗಳ ಖಾತೆಗೆ ಹಣ ವರ್ಗಾವಣೆ ಮಾಡಿ ವಿತ್ ಡ್ರಾ ಮಾಡಿಕೊಳ್ಳುತ್ತಿದ್ದರು. ವಹಿವಾಟಿನ ಮೇಲೆ ಅನುಮಾನ ಬಾರದಂತೆ ಮಾಡಲು 5 ಲಕ್ಷ ರೂ. ಮಾತ್ರ ವಿತ್ ಡ್ರಾ ಮಾಡುತ್ತಿದ್ದರು. ನಗದನ್ನು ಕ್ರಿಪ್ಟೋ ಕರೆನ್ಸಿಗೆ ಪರಿವರ್ತನೆ ಮಾಡಿ ವಿದೇಶದಲ್ಲಿ ಇರುವ ಕಿಂಗ್‌ಪಿನ್‌ಗಳಿಗೆ ವರ್ಗಾವಣೆ ಮಾಡುತ್ತಿದ್ದರು.

ನೌಕರಿ ಆಮಿಷವೊಡ್ಡಿ ವಂಚನೆ :

ಭಾರತೀಯ ಪ್ರಜೆಗಳಿಗೆ ನೌಕರಿ ಆಮಿಷವೊಡ್ಡಿ ಥೈಲ್ಯಾಂಡ್, ಲಾವೋಸ್ ಮತ್ತು ಮ್ಯಾನ್ಮಾರ್ ಮೂಲಕ ಮಾನವ ಕಳ್ಳ ಸಾಗಾಣೆ ಮಾಡಲಾಗುತ್ತಿದ್ದೆ. ಬಳಿಕ ಡ್ರಗ್ಸ್ ಮಾಫಿಯಾ, ಸೈಬರ್ ಅಪರಾಧ ಚಟುವಟಿಕೆಗಳಲ್ಲಿ ಮತ್ತು ಕಾಲ್ ಸೆಂಟರ್‌ಗಳಲ್ಲಿ ದುಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net