

ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಷ್ಕರ ಹೂಡುವುದು ಸರಿಯಲ್ಲ, ಅದರಿಂದ ಸಾರ್ವಜನಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಲಿದೆ. ಕೂಡಲೇ ಸೇವೆ ಆರಂಭಿಸಿ ಎಂದು ಮುಷ್ಕರ ನಿರತ ಸಾರಿಗೆ ನೌಕರರಿಗೆ ಹೈಕೋರ್ಟ್ ಮಂಗಳವಾರ ಸೂಚಿಸಿದ್ದರ ಪರಿಣಾಮ ಹಲವರು ಕೆಲಸಕ್ಕೆ ಹಾಜರ್ ಆಗಿದ್ದಾರೆ.
6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಕಳೆದ 15 ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರಕ್ಕೆ ಸಂಬಂಧಿಸಿದಂತೆ ಮಂಗಳವಾರ ಹೈಕೋರ್ಟ್, ಸದ್ಯದ ಸ್ಥಿತಿಯಲ್ಲಿ ಮುಷ್ಕರ ನಡೆಸುವುದು ಒಳ್ಳೆಯದಲ್ಲ. ನೌಕರರು ಕೆಲಸಕ್ಕೆ ಹಾಜರಾಗುವಂತೆ ಮೌಖಿಕ ಸೂಚನೆ ನೀಡಿತ್ತು. ಹೀಗಿದ್ದಾಗ್ಯೂ ನೌಕರ ಮುಖಂಡರು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು.
ಆದರೆ, ಬುಧವಾರ ಕೆಲ ನೌಕರರು ಸ್ವಯಂ ಪ್ರೇರಿತವಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪರಿಣಾಮ ಬುಧವಾರ ಸರ್ಕಾರಿ ಬಸ್ ಸಂಚಾರ ಪ್ರಮಾಣ ಹೆಚ್ಚಾಗಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ನಾಲ್ಕು ನಿಗಮಗಳಿಂದ 9229 ಬಸ್ ಗಳು ಸೇವೆ ನೀಡಿವೆ.