

ರಾಯಚೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆ ಪುಣ್ಯಸ್ನಾನ ಮಾಡಲೆಂದು ಸ್ನೇಹಿತರೊಂದಿಗೆ ಕೃಷ್ಣಾ ನದಿ ನೀರಿಗೆ ಇಳಿದಿದ್ದ ಯುವಕರಿಬ್ಬರೂ ನೀರುಪಾಲಾದ ಘಟನೆ ದೇವಸುಗೂರು ಬಳಿ ಸಂಭವಿಸಿದೆ.
ರಾಯಚೂರು ನಗರದ ಕೆಇಬಿ ಕಾಲನಿ ನಿವಾಸಿಗಳಾದ ಗಣೇಶ್(30) ಮತ್ತು ಉದಯ್ ಕುಮಾರ್(30) ಮೃತ ದುರ್ದೈವಿಗಳು. ಗಣೇಶ್ ಮತ್ತು ಉದಯ್ಕುಮಾರ್ ಸೇರಿ ಒಟ್ಟು 7 ಮಂದಿ ಸ್ನೇಹಿತರು ಹಬ್ಬದ ಹಿನ್ನೆಲೆ ಶುಕ್ರವಾರ ಸಂಜೆ ಪುಣ್ಯಸ್ನಾನಕ್ಕೆಂದು ಕೃಷ್ಣಾ ನದಿಗೆ ತೆರಳಿದ್ದರು. ಈ ವೇಳೆ ಗಣೇಶ್ ಮತ್ತು ಉದಯ್ ಮೃತಪಟ್ಟಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಮನೆಗಳಲ್ಲಿ ಸೂತಕ ಆವರಿಸಿದೆ.
ಮೃತ ಗಣೇಶ್ ಜೆಸ್ಕಾಂ ಜೆಇ ಅವರ ಸಹೋದರ. ಉದಯ್ ಜೆಸ್ಕಾಂ ಲೈನ್‌ಮನ್ ಆಗಿದ್ದ. ಗಣೇಶ್‌ನ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬರ ಶವಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.