

ಬೆಂಗಳೂರು: ಲಂಬಾಣಿ ತಾಂಡಾ, ಗೊಲ್ಲರಹಟ್ಟಿ ಸೇರಿ ರಾಜ್ಯದ ಅಲೆಮಾರಿ ಜನಾಂಗದ 60 ಸಾವಿರ ಜನರಿಗೆ ನೆಲೆ ಕಲ್ಪಿಸಿಕೊಟ್ಟು ಊರು, ವಿಳಾಸ ದೊರಕಿಸಿಕೊಡುವ ಕ್ರಾಂತಿಕಾರಿ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸ್ಥಳಗಳಿಗೆ ಹೆಸರೂ ಇಲ್ಲ, ಅಲ್ಲಿರುವವರಿಗೆ ವಿಳಾಸವೂ ಇರಲಿಲ್ಲ. ಈಗ ಇವುಗಳನ್ನು ಕಂದಾಯಗ್ರಾಮಗಳೆಂದು ಘೊಷಿಸಲಾಗುತ್ತಿದೆ. ರಾಜ್ಯದಲ್ಲಿ 3,300 ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ಕುರುಬರ ಹಟ್ಟಿ ಸೇರಿ ಅಲೆಮಾರಿಗಳ 500 ವಾಸಸ್ಥಳಗಳಿವೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರ ಈ ಕ್ರಮ ಕೈಗೊಂಡಿದ್ದು, ನವೆಂಬರ್ ಕೊನೇ ವಾರದೊಳಗೆ ಈ ಕೊಡುಗೆ ದಕ್ಕಲಿದೆ ಎಂದರು.
ಪ್ರಕ್ರಿಯೆ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಸಂಪೂರ್ಣ ವಿವರ ಪಡೆದು , ಜಾಗದ ಸರ್ವೆ ಮಾಡಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿ ಕ್ರಯಪತ್ರ ಕೊಡಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಕಲಬುರಗಿ ಅಥವಾ ಯಾದಗಿರಿ ಜಿಲ್ಲೆಯಲ್ಲಿ ಕಾರ್ಯಕ್ರಮ ಏರ್ಪಡಿಸಿ ಕ್ರಯಪತ್ರ ಕೊಡಲಾಗುವುದು. ಕಲಬುರಗಿಯಲ್ಲಿ 29 ಸಾವಿರ, ಯಾದಗಿರಿಯಲ್ಲಿ 9 ಸಾವಿರ, ರಾಯಚೂರಿನಲ್ಲಿ 6 ಸಾವಿರ, ಬೀದರ್ನಲ್ಲಿ 3 ಸಾವಿರ ಮತ್ತು ಬಿಜಾಪುರ ಜಿಲ್ಲೆ ಸೇರಿ 60 ಸಾವಿರ ಮಂದಿಗೆ ಕ್ರಯಪತ್ರ ಕೊಡಲು ಉದ್ದೇಶಿಸಲಾಗಿದೆ ಎಂದು ವಿವರ ನೀಡಿದರು.
ಕಂದಾಯ ಗ್ರಾಮಗಳಾಗಿ ಘೋಷಣೆಯಾದ ಬಳಿಕ ಎಲ್ಲ ಸರ್ಕಾರಿ ಸವಲತ್ತು ಸಿಗಲಿದೆ. 2ನೇ ಹಂತದಲ್ಲಿ ದಾವಣಗೆರೆ ಜಿಲ್ಲೆ, ಶಿವಮೊಗ್ಗ ಸೇರಿ ಹಲವು ಪ್ರದೇಶಗಳಲ್ಲಿರುವ ಲಂಬಾಣಿ ತಾಂಡಾಗಳು, ಗೊಲ್ಲರ ಹಟ್ಟಿಗಳ ಜನರಿಗೆ ಕ್ರಯ ಪತ್ರ ನೀಡಲಾಗುವುದು ಎಂದರು. ಬಹುತೇಕರು ಸರ್ಕಾರಿ ಭೂಮಿಯಲ್ಲಿ ಸೂರು ಕಟ್ಟಿಕೊಂಡು ವಾಸಿಸುತ್ತಿದ್ದು, ಒಂದಷ್ಟು ಪ್ರಮಾಣದಲ್ಲಿ ಖಾಸಗಿ ಭೂಮಿಯಲ್ಲೂ ಮನೆ ಕಟ್ಟಿಕೊಂಡಿದ್ದಾರೆ. ಖಾಸಗಿ ಭೂಮಿ ಇರುವವರಿಗೆ ಮಾರ್ಗಸೂಚಿ ಮೌಲ್ಯ ನೀಡಿ ಅವರಿಂದ ಭೂಮಿ ಖರೀದಿಸಿ ನೀಡಲಾಗುವುದು ಎಂದರು.
ಕಾಫಿ ತೋಟ ಒತ್ತವರಿ ಲೀಸ್: ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಕಾಫಿ ತೋಟಗಳ ಭೂಮಿಯನ್ನು ಒತ್ತುವರಿ ಮಾಡಿದರಿಗೇ ಉಳುಮೆ ಮಾಡಲು ಅವಕಾಶ ನೀಡಿ ಗುತ್ತಿಗೆ ಕೊಡಲಾಗುವುದು. ರೆವಿನ್ಯೂ ನಿವೇಶನಗಳ ಭೂ ಪರಿವರ್ತನೆ ಮಾಡಿಕೊಡಲು ಸಮಸ್ಯೆ ಇಲ್ಲ ಎಂದು ಕಾನೂನು ಇಲಾಖೆ ತಿಳಿಸಿದ್ದು, ಸಿಎಂ ಕೂಡಾ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ರೆವಿನ್ಯೂ ನಿವೇಶನಗಳ ಭೂ ಪರಿವರ್ತನೆಗೆ ಅವಕಾಶ ನೀಡಿದರೆ, ಅಲ್ಲಿ ಮನೆ ಕಟ್ಟಿಕೊಂಡವರಿಗೆ, ಮನೆ ಕಟ್ಟಿಕೊಳ್ಳಲು ಬಯಸುವವರಿಗೆ ಸಾಲದ ಸೌಲಭ್ಯ ದೊರೆಯುತ್ತದೆ ಎಂದು ಅವರು ವಿವರ ನೀಡಿದರು.
ಆದೇಶ ನೀಡಲು ಸಿದ್ಧತೆ
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಮೂವತ್ತು ಸಾವಿರ ಜನರಿಗೆ 94ಸಿ ಮತ್ತು 94(ಸಿಸಿ)ಅಡಿ ಸಕ್ರಮಾತಿ ಆದೇಶ ನೀಡಲು ಸರ್ಕಾರಿ ತಯಾರಿ ನಡೆಸಿದ್ದು,ಈ ಪೈಕಿ ಬೆಂಗಳೂರಿನ ಹತ್ತು ಸಾವಿರ ಜನರಿಗೆ ಡಿಸೆಂಬರ್ನಲ್ಲಿ ಆದೇಶ ನೀಡಲಾಗುವುದು ಎಂದು ಅಶೋಕ್ ತಿಳಿಸಿದರು.