ಸೌರ ಜಿಯೋ ಇಂಜಿನಿಯರಿಂಗ್ ಎಂಬುದು ‘ಜಾಗತಿಕ ಸನ್-ಸ್ಕ್ರೀನ್’ ಇದ್ದಂತೆ. ಇದು ಸೂರ್ಯನ ಸುಡುವಿಕೆಯಿಂದ ನಮಗೆ ತಾತ್ಕಾಲಿಕವಾಗಿ ರಕ್ಷಣೆ ನೀಡಬಲ್ಲದು, ಆದರೆ ಸೂರ್ಯನ ಶಾಖವನ್ನು ಹಿಡಿದಿಟ್ಟುಕೊಳ್ಳುವ ವಾತಾವರಣದ ಅನಿಲಗಳನ್ನು ಇದು ಬದಲಿಸುವುದಿಲ್ಲ. ಹೀಗಾಗಿ, ಇದು ತಾಪಮಾನ ಕಡಿಮೆ ಮಾಡುವಲ್ಲಿ ಪ್ರಭಾವಶಾಲಿ ಅಸ್ತ್ರ ಹೌದಾದರೂ, ಇದನ್ನು ಬಳಸುವ ಮುನ್ನ ಅದರ ಅಡ್ಡಪರಿಣಾಮಗಳ ಬಗ್ಗೆ ವಿಜ್ಞಾನಿಗಳಲ್ಲಿ ಇನ್ನೂ ದೊಡ್ಡ ಮಟ್ಟದ ಆತಂಕವಿದೆ. ಆದರೂ, ವಿಜ್ಞಾನಿಗಳು ಈ ತಂತ್ರಜ್ಞಾನದ ಮೇಲೆ ವಿಶ್ವಾಸ ಇಡಲು ಮುಖ್ಯ ಕಾರಣ ಜ್ವಾಲಾಮುಖಿಗಳು. 1991ರಲ್ಲಿ ಫಿಲಿಪೈನ್ಸ್‌ನ ಮೌಂಟ್ ಪಿನಾಟುಬೊ ಜ್ವಾಲಾಮುಖಿ ಸ್ಫೋಟಗೊಂಡಾಗ, ಅದು ಲಕ್ಷಾಂತರ ಟನ್ ಸಲ್ಫರ್ ಡೈಆಕ್ಸೈಡ್ ಅನ್ನು ವಾತಾವರಣಕ್ಕೆ ಚಿಮ್ಮಿಸಿತ್ತು. ಈ ಕಣಗಳು ಸೂರ್ಯನ ಬೆಳಕನ್ನು ತಡೆದಿದ್ದರಿಂದ, ಮುಂದಿನ 15 ತಿಂಗಳುಗಳಲ್ಲಿ ಜಾಗತಿಕ ತಾಪಮಾನವು ಕೊಂಚ ಇಳಿಕೆಯಾಗಿತ್ತು. ಸೌರ ಜಿಯೋ ಇಂಜಿನಿಯರಿಂಗ್ ಇದೇ ನೈಸರ್ಗಿಕ ಪ್ರಕ್ರಿಯೆಯನ್ನು ಕೃತಕವಾಗಿ, ನಿಯಂತ್ರಿತ ರೀತಿಯಲ್ಲಿ ಮಾಡಲು ಬಯಸುತ್ತದೆ.