

ನವದೆಹಲಿ: ಮೇ ತಿಂಗಳ ಮೊದಲ ದಿನದಂದೇ ಬ್ಯಾಂಕಿಂಗ್ ವಲಯ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿದೆ. ಕೇಂದ್ರ ಸರ್ಕಾರವು ‘ಒಂದು ರಾಜ್ಯ- ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್’ ನೀತಿಗೆ ಹಸಿರು ನಿಶಾನೆ ತೋರಿರುವುದರಿಂದ ಮೇ 1ರಿಂದ ದೇಶದಲ್ಲಿನ 15 ಗ್ರಾಮೀಣ ಬ್ಯಾಂಕ್ಗಳು ವಿಲೀನಗೊಳ್ಳಲಿವೆ. ಈ ವಿಲೀನ ಪ್ರಕ್ರಿಯೆಯಿಂದಾಗಿ ದೇಶದಲ್ಲಿನ ಆರ್ಆರ್ಬಿಗಳ ಸಂಖ್ಯೆ 43ರಿಂದ 28ಕ್ಕೆ ಇಳಿಕೆಯಾಗಲಿದೆ. ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನದ 15 ಬ್ಯಾಂಕುಗಳು ವಿಲೀನಗೊಳ್ಳಲಿವೆ. ಈ ವಿಲೀನದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಗುಣಮಟ್ಟದ ಸೇವೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
ಕರ್ನಾಟಕದಲ್ಲಿ ಯಾವೆಲ್ಲ ಬ್ಯಾಂಕುಗಳು ವಿಲೀನ?: ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಧಾರವಾಡ) ವಿಲೀನಗೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೆಸರಿನಲ್ಲಿ ಕಾರ್ಯನಿರ್ವಹಿಸಲಿದೆ.
ಇತರ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿಸಿರುವ ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್, ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಸಪ್ತಗಿರಿ ಗ್ರಾಮೀಣ ಬ್ಯಾಂಕ್ ಮತ್ತು ಆಂಧ್ರಪ್ರದೇಶ ಗ್ರಾಮೀಣ ವಿಕಾಸ ಬ್ಯಾಂಕ್ಗಳನ್ನು ವಿಲೀನಗೊಳಿಸಲಾಗುತ್ತಿದೆ. ಈ ವಿಲೀನದ ಬಳಿಕ ಆಂಧ್ರಪ್ರದೇಶ ಗ್ರಾಮೀಣ ಬ್ಯಾಂಕ್ ರಚನೆಯಾಗುತ್ತದೆ.