

ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದ ವೈಟ್ ಗಾರ್ಡನ್ ಬಡಾವಣೆಯ ನಿರ್ಮಾಣ ಹಂತದ ಮನೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿ ಶವವನ್ನು ಮೆಟ್ಟಿಲು ಕೆಳಗೆ ಬಚ್ಚಿಟ್ಟು, ಆರೋಪಿ ಪರಾರಿಯಾಗಿದ್ದಾನೆ. ಮಹಿಳೆಯನ್ನು ಆಂಧ್ರದ ಕುಪ್ಪಂಗುಡಿಪಲ್ಲಿ ಬಳಿಯ ಬುರಿಗಾನ ಕುಂಟ(ಕುಪ್ಪಂ) ಯಶೋದಾ (45) ಎಂದು ಗುರುತಿಸಲಾಗಿದೆ.
ಕಾರ್ಮಿಕರಾದ ಶ್ರೀನಿವಾಸ್ ಹಾಗೂ ಸಂತೋಷ ಎಂಬುವರು ಮನೆಯ ನಿರ್ಮಾಣ ಕೆಲಸ ಮಾಡುತ್ತಿದ್ದು, ಕೆಲವೊಮ್ಮೆ ಇಬ್ಬರೂ ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಈ ನಡುವೆ 15 ದಿನಗಳ ಹಿಂದೆ ಶ್ರೀನಿವಾಸ್ ಕೆಲಸ ಬಿಟ್ಟು ಹೋಗಿದ್ದ. ಆದರೆ, ಮಂಗಳವಾರ ಮಧ್ಯಾಹ್ನ ಕಾಮಗಾರಿ ಸ್ಥಳಕ್ಕೆ ಬಂದಿದ್ದು, ರಾತ್ರಿ ಸಂತೋಷ್ ಮನೆಯಲ್ಲೇ ಉಳಿದುಕೊಂಡಿದ್ದ. ಕಟ್ಟಡದಲ್ಲೇ ಕೆಲಸ ಮಾಡುತ್ತಿದ್ದ ಯಶೋದಾ ಅವರನ್ನು ಬುಧವಾರ ಮೊದಲನೇ ಅಂತಸ್ತಿನಲ್ಲಿ ಕೊಲೆ ಮಾಡಿ, ಬಳಿಕ ಕೆಳಗೆ ಎಳೆದು ತಂದು, ಮೆಟ್ಟಿಲು ಕೆಳಗೆ ಶವ ಬಚ್ಚಿಟ್ಟು ಸಂತೋಷ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೊಲೆ ಮಾಹಿತಿ ತಿಳಿದ ಪಟ್ಟಣದ ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಡಿವೈಎಸ್ಪಿ ನಾಕ್ತೆ ಸ್ಥಳ ಪರಿಶೀಲಿಸಿದರು.