ಭಾರತದ ಹಿತಕ್ಕೆ ಅಪಾಯ

ವಿಜಯವಾಣಿ (2)
Published on

‘ಡ್ರ್ಯಾಗನ್ ರಾಷ್ಟ್ರ’ ಚೀನಾದ ವಿಸ್ತರಣಾ ನೀತಿ ಹೊಸದೇನಲ್ಲ. ಆದರೆ, ಗಡಿಭಾಗಕ್ಕೆ ಸಮೀಪದ ಪ್ರದೇಶಗಳಲ್ಲಿ ಅಥವಾ ವಿವಾದಾತ್ಮಕ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಸ್ಥಾಪಿಸುವುದು ಮತ್ತು ಮೂಲಸೌಕರ್ಯಗಳನ್ನು ವಿಸ್ತರಿಸುವುದು ಅದರ ಚಾಳಿ.

ಭಾರತವು ಗಡಿ ಪ್ರದೇಶದ ತನ್ನ ಭೂಭಾಗದಲ್ಲಿ ರಸ್ತೆ ನಿರ್ವಣದಂಥ ಕಾಮಗಾರಿ ಕೈಗೊಂಡರೆ, ಅದಕ್ಕೆ ಭಾರಿ ಪ್ರತಿರೋಧ ಒಡ್ಡುವ ಚೀನಾ ತಾನು ಮಾತ್ರ ಇತರರ ಹಿತಗಳಿಗೆ ಧಕ್ಕೆ ಒದಗಿಸುವಂಥ ಯೋಜನೆಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಚೀನಾ ಟಿಬೆಟ್​ನಲ್ಲಿ 11 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಪುತ್ರಾ ನದಿಗೆ ಜಗತ್ತಿನ ಅತಿ ದೊಡ್ಡ ಅಣೆಕಟ್ಟನ್ನು ಕಟ್ಟಲು ಮುಂದಾಗಿದೆ. ಅಷ್ಟೇ ಅಲ್ಲ, ಅದರ ಕೆಳಭಾಗದಲ್ಲಿ ಜಲವಿದ್ಯುತ್ ಯೋಜನೆಯನ್ನೂ ಕೈಗೊಳ್ಳಲಿದೆ. ಭಾರತದ ಅರುಣಾಚಲ ಪ್ರದೇಶದ ಗಡಿಭಾಗದ ಆಳವಾದ ಕಮರಿಯಲ್ಲಿ ಇದು ಅನುಷ್ಠಾನಗೊಳ್ಳಲಿದೆ.

ಬ್ರಹ್ಮಪುತ್ರಾ ನೀರಿನಲ್ಲಿ ಭಾರತಕ್ಕೂ ಪಾಲಿದ್ದು, ಚೀನಾದ ಈ ಅಣೆಕಟ್ಟಿನಿಂದ ಭಾರತದ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ಮಾತ್ರವಲ್ಲ, ಬ್ರಹ್ಮಪುತ್ರಾ ನದಿಯ ನೀರು ಅರುಣಾಚಲ ಪ್ರದೇಶಕ್ಕೆ ಹರಿಯುವ ಮುನ್ನ ಯೂ ಟರ್ನ್ ತೆಗೆದುಕೊಂಡು, ಅಂತಿಮವಾಗಿ ಬಾಂಗ್ಲಾದೇಶ ತಲುಪುತ್ತದೆ. ಅಣೆಕಟ್ಟೆ ನಿರ್ವಣವಾದರೆ ನದಿ ನೀರಿನ ನೈಸರ್ಗಿಕ ಹರಿವಿಗೆ ಅಡ್ಡಿಯಾಗಲಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ನದಿ ನೀರಿನ ನೈಸರ್ಗಿಕ ಹರಿವಿಗೆ ತಡೆಯೊಡ್ಡುವುದರಿಂದ ಏನೆಲ್ಲ ಅನಾಹುತಗಳಾಗುತ್ತವೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ಕಣ್ಮುಂದೆ ಇವೆ.

ಹೀಗಾಗಿ, ಚೀನಾ ನಿರ್ವಿುಸಲು ಹೊರಟಿರುವ ಅಣೆಕಟ್ಟೆ ಮತ್ತು ಜಲವಿದ್ಯುತ್ ಯೋಜನೆ ಹಲವು ಆಯಾಮಗಳಲ್ಲಿ ತೀವ್ರ ಕಳವಳಕಾರಿಯಾಗಿದೆ. ಮುಖ್ಯವಾಗಿ, ಅಣೆಕಟ್ಟಿನ ಕೆಳಭಾಗದಲ್ಲಿರುವ ಭಾರತ ಮತ್ತು ಬಾಂಗ್ಲಾದೇಶದ ಲಕ್ಷಾಂತರ ಜನರ ಬದುಕಿಗೆ ತೊಂದರೆಯಾಗುವ ಭೀತಿ ಇದೆ. ಅಲ್ಲದೆ, ಸ್ಥಳೀಯ ಪರಿಸರದ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರಲಿದ್ದು, ನೈಸರ್ಗಿಕ ಸಂರಚನೆಗೂ ಧಕ್ಕೆ ಒದಗಲಿದೆ. ಅಲ್ಲದೆ, ನದಿ ನೀರಿನ ಹರಿವಿನ ಮೇಲೆ ಕ್ರಮೇಣ ಚೀನಾವೇ ನಿಯಂತ್ರಣ ಸಾಧಿಸುವ ಸಾಧ್ಯತೆ ಇದ್ದು, ಇದು ಹೊಸದೊಂದು ಜಲವಿವಾದಕ್ಕೆ ಕಾರಣವಾಗುತ್ತದೆ. ಒಂದು ವೇಳೆ, ಭಾರಿ ಪ್ರಮಾಣದ ನೀರನ್ನು ಹೊರಬಿಟ್ಟರೆ, ಅಣೆಕಟ್ಟು ಪ್ರದೇಶದ ಕೆಳ ಭಾಗದಲ್ಲಿ ವಾಸಿಸುವ ಜನರ ಬದುಕು ಮೂರಾಬಟ್ಟೆಯಾಗುತ್ತದೆ. ಅಣೆಕಟ್ಟು ನಿರ್ಮಾಣ ಇಂಜಿನಿಯರಿಂಗ್ ಸವಾಲುಗಳನ್ನು ಎದುರಿಸಲಿದ್ದು, ಚೀನಾ ಇಂಥ ದುಸ್ಸಾಹಸದಿಂದ ಹಿಂದೆ ಸರಿಯುವುದು ಒಳಿತು.

ಟಿಬೆಟ್​ನಲ್ಲಿ ಅಣೆಕಟ್ಟೆ ನಿರ್ಮಾಣ ಯೋಜನೆಯಿಂದ ಪರಿಸರದ ಮೇಲಾಗಲೀ, ನೀರಿನ ಕೆಳ ಹರಿವಿನಲ್ಲಾಗಲೀ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಸ್ಥಳೀಯ ಪರಿಸರವನ್ನು ಬದಲಾಯಿಸುವುದು ಮಾತ್ರವಲ್ಲದೆ ನದಿಯ ಕೆಳಹರಿವಿನ ಮಾರ್ಗವೂ ಬದಲಾಗಲಿದೆ ಎಂಬುದು ಭಾರತ ಮತ್ತು ಬಾಂಗ್ಲಾದೇಶದ ಕಳವಳವಾಗಿದೆ. ಈ ವಿಷಯವನ್ನು ಭಾರತವು ಕೂಡಲೇ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಿ, ಆಗಲಿರುವ ಹಾನಿಯ ತೀವ್ರತೆಯನ್ನು ಮನಗಾಣಿಸಿ ಚೀನಾದ ಅಣೆಕಟ್ಟು ಮತ್ತು ಜಲವಿದ್ಯುತ್ ಯೋಜನೆಗೆ ತಡೆ ಒಡ್ಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net