

Bank : ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಬ್ಯಾಂಕ್ವೊಂದರಲ್ಲಿ ದುಷ್ಕರ್ಮಿಯೊಬ್ಬ ಗ್ರಾಹಕರ ಗಮನಕ್ಕೆ ಬಾರದಂತೆ ಹಣ ತುಂಬಿದ ಬ್ಯಾಗ್ನ್ನು ಕದ್ದೊಯ್ಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವೀಡಿಯೋದಲ್ಲಿ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಯುವಕನೊಬ್ಬ ಹಣ ತುಂಬಿದ ಬ್ಯಾಗ್ ಮೇಜಿನ ಕೆಳಗೆ ಇರುವುದನ್ನು ಗಮನಿಸುತ್ತಿದ್ದಾನೆ. ನಂತರ, ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡ ಆತ ನಿಧಾನಕ್ಕೆ ಅಲ್ಲೇ ಸುತ್ತುವರಿದಿದ್ದಾನೆ. ಪಕ್ಕದಲ್ಲಿರುವ ಗ್ರಾಹಕರು ನಿದ್ದೆಗೆ ಜಾರಿದ್ದು, ಈ ವೇಳೆ ಅಲ್ಲಿರುವ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿರುವ ದೃಶ್ಯವನ್ನು ವಿಡಿಯೋ ತೋರಿಸುತ್ತಿದೆ.
ವಿಷಯ ತಿಳಿದ ಕೂಡಲೇ ಬ್ಯಾಂಕ್ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದು, ದರೋಡೆಕೋರನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ಸಲ್ಲಿಸಲಾಗಿದ್ದು, ಆರೋಪಿಯ ಹಿಂದೆ ಯಾರಿರಬಹುದು ಎಂದು ಗುರುತಿಸುವ ಪ್ರಯತ್ನಗಳನ್ನು ಪೊಲೀಸ್ ಅಧಿಕಾರಿಗಳು ಮಾಡಿದ್ದಾರೆ.
ಇದೇ ರೀತಿ ರಾಜ್ಯದಲ್ಲಿ ದರೋಡೆ ಕೇಸುಗಳು ಹೆಚ್ಚುತ್ತಿದ್ದು, ಆಗಸ್ಟ್ ತಿಂಗಳಲ್ಲಿ, ಮಧ್ಯಪ್ರದೇಶದ ಜಬಲ್ಪುರದಲ್ಲಿ ಖಾಸಗಿ ಹಣಕಾಸು ಬ್ಯಾಂಕಿನಲ್ಲಿ ದುಷ್ಕರ್ಮಿಗಳ ಗುಂಪೊಂದು ದರೋಡೆ ನಡೆಸಿ 14 ಕೆಜಿ ಚಿನ್ನ ಮತ್ತು 5 ಲಕ್ಷ ರೂ. ನಗದನ್ನು ದೋಚಿಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು.
ಆರೋಪಿಗಳು ಹಗಲು ಹೊತ್ತಿನಲ್ಲಿಯೇ ಬ್ಯಾಂಕ್ಗೆ ನುಗ್ಗಿ ಬಂದೂಕು ತೋರಿಸಿ ದರೋಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಾದ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ. (ಏಜೆನ್ಸೀಸ್)