ಕೈಗಾರಿಕೆ ವಲಯದ ಗೋದಾಮಿನ ಮೇಲೆ ದಾಳಿ; ನಕಲಿ ಕ್ರಿಮಿನಾಶಕ ಔಷಧ ಜಪ್ತಿ, ಇಬ್ಬರ ಬಂಧನ| vijayapura

Untitled design
Published on

ವಿಜಯಪುರ : ಪೊಲೀಸರು ಮತ್ತು ಕೃಷಿ ಅಧಿಕಾರಿಗಳು ನಕಲಿ ಕ್ರಿಮಿನಾಶ ತಯಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಈ ದಾಳಿಯಲ್ಲಿ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೊಟೆಕ್ಷನ್ ಎನ್ನುವ ಕಂಪನಿಯ ಬೋರ್ಡ್ ಹಾಕಿರುವ ಗೋದಾಮಿನಲ್ಲಿ ಲೈಫ್ ಅಗೋ ಕೆಮಿಕಲ್ ಕಂಪನಿಯ ಹೆಸರಿನಲ್ಲಿ ತಾವೇ ತಯಾರಿಸಿದ ನಕಲಿ ಕ್ರಿಮಿನಾಶಕ ಔಷಧಗಳಿಗೆ ಲೈಫ್ ಅಗೋ ಕೆಮಿಕಲ್ ಕಂಪನಿಯ ಲೇಬಲ್‌ಗಳನ್ನು ಅಂಟಿಸಿ, ಅನಧಿಕೃತವಾಗಿ ನಕಲಿ ಕ್ರಿಮಿನಾಶಕ ಔಷಧಗಳನ್ನು ತಯಾರಿಸಿ, ಗೋದಾಮಿನಲ್ಲಿ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ಅಧಿಕೃತ ಮಾಹಿತಿ ಆಧರಿಸಿ ಜಂಟಿ ಕಾರ್ಯಾಚರಣೆಗೆ ರೂಪುರೇಷೆ ಸಿದ್ಧಪಡಿಸಲಾಗಿತ್ತು.

ವಿಜಯಪುರ ನಗರದ ಕೈಗಾರಿಕೆ ಪ್ರದೇಶದ ಗೋದಾಮಿನ ಮೇಲೆ ಗುರುವಾರ ಸಂಜೆಯೇ ದಾಳಿ ನಡೆದಿದ್ದು, ಈ ಸಂಬಂಧ ಇದೀಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಂಡಗೂಳಿ ಗ್ರಾಮದ ವಿದ್ಯಾಸಾಗರ ಚಿನ್ನಾರೆಡ್ಡಿ ಮಲ್ಲಾಬಾದಿ ಹಾಗೂ ಕಲಬುರಗಿ ಜಿಲ್ಲೆಯ ಬೊಳನಿ ಗ್ರಾಮದ ಅಮರ ಗುರುನಾಥ ರೆಡ್ಡಿ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಸುಮಾರು 1,36,98,523 ರೂ. ಮೌಲ್ಯದ ಲೈಫ್ ಅಗೋ ಕೆಮಿಕಲ್ ಹೆಸರಿನಲ್ಲಿರುವ ನಕಲಿ ಕ್ರಿಮಿನಾಶಕ ಔಷಧಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಅದರಂತೆ ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಸಿಪಿಐ ಮಲ್ಲಯ್ಯ ಮಠಪತಿ, ಪಿಎಸ್‌ಐ ಬಸವರಾಜ ಎ.ತಿಪರಡ್ಡಿ, ಸಿಬ್ಬಂದಿ ಅಮಗೊಂಡ ಪರಪ್ಪ ಬಿರಾದಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಯಶಸ್ವಿಯಾಗಿ ಕಾರ್ಯಚರಣೆ ನಡೆಸಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net