ದೇವಸ್ಥಾನದ ನಿಧಿ ದೋಚಲು ಬಂದವ ಸ್ಥಳದಲ್ಲೇ ದುರ್ಮರಣ, ಮೂವರ ಸ್ಥಿತಿ ಗಂಭೀರ

nidhi
Published on

ಹೊಸಕೋಟೆ: ಹಿಂದಿಗಾನಹಳ್ಳಿಯ ಆಂಜನೇಯ ಸ್ವಾಮಿ ದೇಗುಲದಲ್ಲಿ ನಿಧಿ ಶೋಧಕ್ಕೆ ಹೋದ 8 ಜನರ ಪೈಕಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬೆಂ.ಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿಯ ಹಿಂದಿಗಾನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಿಧಿ ಇದೆಯೆಂದು ಅದನ್ನು ಹುಡುಕಿ ದೋಚಿಕೊಂಡು ಹೋಗಲೆಂದು ಸಂಚು ರೂಪಿಸಿದ್ದ 8 ಜನರ ತಂಡ ಗುರುವಾರ ತಡರಾತ್ರಿ ಬಂದಿತ್ತು. ನಿಧಿಗಾಗಿ ದೇಗುಲದ ನೆಲವನ್ನು ಅಗೆಯುತ್ತಿದ್ದ ದುಷ್ಕರ್ಮಿಗಳ ಮೇಲೆ ಕಲ್ಲಿನ ಮಂಟಪ ಕುಸಿದಿದ್ದು, ಹಿಂದಿಗನಾಳ ಗ್ರಾಮದ ಸುರೇಶ್ (22) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ನಿಧಿ ಶೋಧನೆ ವೇಳೆ ಮಂಟಪ ಕುಸಿದು ಸುರೇಶ್​​ ಮೃತಪಟ್ಟು, ಕೆಂಬಳಿಗಾನಹಳ್ಳಿ ಗ್ರಾಮದ ಶ್ರೀನಿವಾಸ್, ಮಂಜುನಾಥ್ ಮತ್ತು ಯಲಹಂಕದ ಸಬಾಸ್ಟಿನ್ ಗಂಭೀರ ಗಾಯಗೊಂಡಿದ್ದಾರೆ. ಉಳಿದ ನಾಲ್ವರು ಪೊಲೀಸರ ಕೈಗೆ ಸಿಕ್ಕಿ ಬೀಳುವ ಭೀತಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನಿಧಿ ಆಸೆಗೆ ಹೋಗಿ ಪ್ರಾಣಬಿಟ್ಟ ಘಟನೆ ಇಡೀ ಗ್ರಾಮವನ್ನೇ ಬಿಚ್ಚಿಬೀಳಿಸಿದ್ದು, ಮಾಡಬಾರದ್ದನ್ನು ಮಾಡಲು ಹೋದರೆ ಆ ದೇವರು ಕೊಡೋ ಶಿಕ್ಷೆ ಭಯಾನಕ ಎಂದೆಲ್ಲ ಜನರು ಚರ್ಚಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net