

|ಜಗನ್ ರಮೇಶ್ ಬೆಂಗಳೂರು
ಕೌಟುಂಬಿಕ ಕಲಹದ ಹಿನ್ನೆಲೆ ಗಂಡನ ಮನೆ ತೊರೆದಿದ್ದ ಪತ್ನಿಯನ್ನು ಐದು ತಿಂಗಳ ಕಾಲ ಅಕ್ರಮವಾಗಿ 'ವೇಶ್ಯಾವಾಟಿಕೆಗಾಗಿ ಮಾನವ ಕಳ್ಳಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರ'ದಲ್ಲಿ ಇಟ್ಟ ಪೊಲೀಸ್ ಇನ್ಸ್ಪೆಕ್ಟರ್ಗೆ ಸಂಕಷ್ಟ ಎದುರಾಗಿದೆ.
ಸಂತ್ರಸ್ತ ಮಹಿಳೆಗೆ 2017ರಲ್ಲಿ ಮದುವೆಯಾಗಿತ್ತು. ದಂಪತಿಗೆ 3 ವರ್ಷದ ಹೆಣ್ಣು ಮಗು ಇದೆ. ಈ ಮಧ್ಯೆ ಗಂಡ-ಹೆಂಡತಿ ನಡುವೆ ಮನಸ್ತಾಪ ಮೂಡಿತ್ತು. ಇದರಿಂದ, ಮಹಿಳೆ ತನ್ನ ಮಗಳೊಂದಿಗೆ ಗಂಡನ ಮನೆ ತೊರೆದು ಬಂದಿದ್ದಳು. 2021ರ ಮೇ 3ರಂದು ಆಕೆಯ ಪತಿ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು. ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ಬಾಳಾಸಾಹೇಬ್ ಪಾಟೀಲ್, ದೂರುದಾರನ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದ್ದರು. ಆದರೆ, ಪತಿಯೊಂದಿಗೆ ತೆರಳಲು ಮಹಿಳೆ ನಿರಾಕರಿಸಿದ್ದಳು.
ಗಂಡನ ಮನೆಗೆ ಹೋಗಲು ಒಪ್ಪದ ಪತ್ನಿ ಮತ್ತು ಆಕೆಯ 3 ವರ್ಷದ ಹೆಣ್ಣು ಮಗುವನ್ನು 'ವೇಶ್ಯಾವಾಟಿಕೆಗಾಗಿ ಮಾನವ ಕಳ್ಳಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರ'ಕ್ಕೆ ಇನ್ಸ್ಪೆಕ್ಟರ್ ಕಳುಹಿಸಿದ್ದರು. ನನ್ನ ಇಚ್ಛೆಗೆ ವಿರುದ್ಧವಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಈ ಮಹಿಳೆ, ಇನ್ಸ್ಪೆಕ್ಟರ್ ಹಾಗೂ ಪುನರ್ವಸತಿ ಕೇಂದ್ರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಳು.
ಆಘಾತ ವ್ಯಕ್ತಪಡಿಸಿದ ಕೋರ್ಟ್: ಅರ್ಜಿದಾರ ಮಹಿಳೆ ಮೇ 25ರಂದು ಠಾಣೆಗೆ ಬಂದು ಮೌಖಿಕ ಹೇಳಿಕೆ ನೀಡಿದ್ದರು. ಪ್ರತಿದಿನ ಕುಡಿದು ಬಂದು ಪತಿ ನನ್ನ ಹಲ್ಲೆ ನಡೆಸುತ್ತಿದ್ದಾನೆ, ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗುತ್ತಿದೆ ಎಂದು ತಿಳಿಸಿದ್ದರು. ಇದರಿಂದ, ಆಕೆಯ ಪತಿಯನ್ನು ಠಾಣೆಗೆ ಕರೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಯಿತು. ಆದರೆ, ಮಹಿಳೆ ಪತಿಯೊಂದಿಗೆ ತೆರಳಲು ಸಿದ್ಧಳಿರಲಿಲ್ಲ. ಆಕೆಯ ಪಾಲಕರೂ ಠಾಣೆಗೆ ಬರಲು ನಿರಾಕರಿಸಿದರು. ನಂತರ ಪುನರ್ವಸತಿ ಕೇಂದ್ರವನ್ನು ಸಂಪರ್ಕಿಸಿ, ಅಲ್ಲಿಗೆ ಕಳುಹಿಸಿಕೊಡಲಾಯಿತು ಎಂದು ಇನ್ಸ್ಪೆಕ್ಟರ್ ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು. ಆದರೆ, ಪತಿಯೊಂದಿಗೆ ತೆರಳಲು ನಿರಾಕರಿಸಿದ 22 ವರ್ಷದ ಮಹಿಳೆ ಮತ್ತವಳ 3 ವರ್ಷದ ಮಗಳನ್ನು ವೇಶ್ಯಾವಾಟಿಕೆ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿರುವುದು ನಿಜಕ್ಕೂ ಆಘಾತಕಾರಿ ಎಂದು ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.
ಗಂಡನ ಮನೆ ತೊರೆದು ಬಂದು, ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿರುವ ಪ್ರಕರಣವೇ ಹೊರತು ನಿರ್ಗತಿಕ ಅಥವಾ ರಕ್ಷಿಸಲ್ಪಟ್ಟ ಮಹಿಳೆಯ ಪ್ರಕರಣವಲ್ಲ. ಇನ್ಸ್ಪೆಕ್ಟರ್ ಪ್ರಮಾಣಪತ್ರದಲ್ಲಿ ಮಹಿಳೆಯೇ ಠಾಣೆಗೆ ಬಂದಿದ್ದಳು ಎಂದು ಹೇಳಲಾಗಿದೆ. ಆದರೆ, ಅದೂ ಸತ್ಯವಲ್ಲ. ಪತಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಆಕೆಯನ್ನು ಠಾಣೆಗೇ ಕರೆಸಿಕೊಳ್ಳಲಾಗಿದೆ. ಅನ್ಯ ಉದ್ದೇಶಕ್ಕೆಂದೇ ಇರುವ ಪುನರ್ವಸತಿ ಕೇಂದ್ರದಲ್ಲಿ ಮೇ 26ರಿಂದ ಅ.21ರವರೆಗೆ ಬಹುತೇಕ 5 ತಿಂಗಳ ಕಾಲ ಮಹಿಳೆ ಮತ್ತು ಮಗುವನ್ನು ಇರಿಸಿರುವ ಇನ್ಸ್ಪೆಕ್ಟರ್ ಕ್ರಮ ಬಲವಂತದ ಬಂಧನವಲ್ಲದೇ ಬೇರೇನೂ ಅಲ್ಲ. ಅರ್ಜಿದಾರಳ ವಿರುದ್ಧ ಬಂಧಿಸುವಂಥ ಯಾವುದೇ ಆರೋಪಗಳಿಲ್ಲದಿದ್ದರೂ ಆಕೆಗೆ ಜೈಲು ಶಿಕ್ಷೆ ವಿಧಿಸಿದಂತಾಗಿದೆ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಆತನಿಂದ ದೂರವಿರುಸಿರುವ ಯತ್ನ: ಅರ್ಜಿದಾರ ಮಹಿಳೆ ನೆರೆ ಮನೆಯ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ಗಂಡನ ಮನೆ ತೊರೆಯಲು ನಿರ್ಧರಿಸಿದ್ದಾಳೆ ಎಂಬ ವಿಚಾರ ಕೌನ್ಸೆಲಿಂಗ್ ನಡೆಸುವ ವೇಳೆ ಇನ್ಸ್ಪೆಕ್ಟರ್ಗೆ ತಿಳಿದಿದೆ. ಈ ಕಾರಣದಿಂದ ಆಕೆಯನ್ನು ನೆರೆಮನೆಯ ವ್ಯಕ್ತಿಯಿಂದ ದೂರವಿರಿಸುವ ಉದ್ದೇಶದಿಂದ ಒತ್ತಾಯಪೂರ್ವಕವಾಗಿ ಪುನರ್ವಸತಿ ಕೇಂದ್ರದಲ್ಲಿರಿಸಿದ್ದಾರೆ ಎಂದೆನಿಸುತ್ತಿದೆ. ಆದರೆ, ವೈವಾಹಿಕ ಸಂಬಂಧದಲ್ಲಿ ಮಧ್ಯಪ್ರವೇಶಿಸಿ, ನ್ಯಾಯ ಕೊಡಿಸುವ ನೆಪದಲ್ಲಿ ನೈತಿಕ ಪೊಲೀಸ್ಗಿರಿ ನಡೆಸುವ ಅಧಿಕಾರ ಪೊಲೀಸರಿಗಿಲ್ಲ ಎಂದು ಕೋರ್ಟ್ ಹೇಳಿದೆ.
22 ವರ್ಷದ ಮಹಿಳೆ ಮತ್ತವಳ ಮಗುವನ್ನು ವೇಶ್ಯಾವಾಟಿಕೆ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿರಿಸಿರುವ ಇನ್ಸ್ಪೆಕ್ಟರ್ ಸೂಕ್ಷ್ಮತೆ ಹಾಗೂ ಮಾನವೀಯತೆ ಮರೆತು ವರ್ತಿಸಿದ್ದಾರೆ ಎಂದು ಕಿಡಿ ಕಾರಿರುವ ನ್ಯಾಯಮೂರ್ತಿ ಎನ್.ಎಸ್. ಸಂಜಯ್ಗೌಡ ಅವರಿದ್ದ ಪೀಠ, ಮಹಿಳೆ ಮತ್ತು ಮಗುವನ್ನು ಕೂಡಲೇ ಬಿಡುಗಡೆ ಮಾಡಲು ಆದೇಶಿಸಿದೆ. ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಪುನರ್ವಸತಿ ಕೇಂದ್ರಕ್ಕೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ. ಅಮಾನವೀಯವಾಗಿ ವರ್ತಿಸಿದ ಅಧಿಕಾರಿ ವಿರುದ್ಧ ನ್ಯಾಯಮೂರ್ತಿ ಕಿಡಿಕಾರಿದ್ದಾರೆ.