ಚಳಿ ತಡೆಯಲಾಗದೆ ಬೈಕ್​ಗೆ ಬೆಂಕಿ ಇಟ್ಟು ಮೈ ಬಿಸಿ ಮಾಡಿಕೊಂಡ ಭೂಪ! ಈತನ ಹಿನ್ನೆಲೆ ಕೇಳಿದ್ರೆ ಶಾಕ್​ ಆಗ್ತೀರಿ

bike fire
Published on

ನಾಗ್ಪುರ: ಚಳಿಯಿಂದ ತಪ್ಪಿಸಿಕೊಳ್ಳೋಕೆ ಮೈತುಂಬಾ ಬಟ್ಟೆ, ಸ್ವೆಟರ್​, ಜರ್ಕಿನ್​, ಹ್ಯಾಂಡ್​ ಗ್ಲೌಸ್​ ಹಾಕೋದು ಕಾಮನ್​. ಆದರೂ ಚಳಿಯನ್ನು ತಡಿಯೋಕೆ ಆಗ್ತಿಲ್ಲ ಅಂದ್ರೆ ಸ್ಥಳೀಯವಾಗಿ ಸಿಗೋ ಸೌದೆ ಬಳಿ ಬೆಂಕಿ ಕಾಯಿಸಿಕೊಳ್ತಾರೆ. ಆದರೆ, ಇಲ್ಲೊಬ್ಬ ಭೂಪ ಬೈಕ್​ಗೆ ಬೆಂಕಿ ಇಟ್ಟು ಮೈಬಿಸಿ ಮಾಡಿಕೊಂಡಿದ್ದಾನೆ.

ಇಂತಹ ವಿಚಿತ್ರ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ. ಚಳಿಯಿಂದ ಪಾರಾಗಲು ಬೈಕ್​ಗೆ ಬೆಂಕಿ ಇಟ್ಟವನ ಹೆಸರು ಛೋಟಾ ಸರ್ಫರಾಜ್. ಅಂದಹಾಗೆ ಈ ಬೈಕ್​ ಸ್ವಂತದ್ದಲ್ಲ, ಕದ್ದದ್ದು!

ಕೆಲ ದಿನಗಳ ಹಿಂದೆ ದರೋಡೆಗೆ ಯತ್ನಿಸಿದ್ದ ಛೋಟಾ ಸರ್ಫರಾಜ್ ಮತ್ತು ಈತನ ನಾಲ್ವರು ಸಹಚರರನ್ನು ಯಶೋಧರನಗರ ಪೊಲೀಸರು ಬಂಧಿಸಿದ್ದರು. ಆಗ ಛೋಟಾ ಸರ್ಫರಾಜ್ ಗ್ಯಾಂಗ್​ 10 ಬೈಕ್​ ಕಳವು ಮಾಡಿದ್ದರ ಬಗ್ಗೆಯೂ ಬಯಲಾಗಿತ್ತು. ಈ ಪೈಕಿ 9 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಬೈಕ್​ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದೆ.

ಪೊಲೀಸರ ತನಿಖೆಯಲ್ಲಿ ಆರೋಪಿ ಛೋಟಾ ಸರ್ಫರಾಜ್ ಬಾಯ್ಬಿಟ್ಟಿದ್ದು, ತಾನು ಪೊಲೀಸರಿಂದ ತಲೆಮರೆಸಿಕೊಳ್ಳಲು ಗದ್ದೆಯೊಂದರಲ್ಲಿ ರಾತ್ರಿವೇಳೆ ಅಡಗಿದ್ದೆ. ಸಿಕ್ಕಾಪಟ್ಟೆ ಚಳಿ ಇತ್ತು. ಮೈ ನಡುಗುತ್ತಿತ್ತು. ಚಳಿ ತಡೆಯಲಾರದೆ ತನ್ನೊಂದಿಗಿದ್ದ ಕದ್ದ ಬೈಕ್​ಗೆ ಬೆಂಕಿ ಇಟ್ಟು ಮೈಬಿಸಿ ಮಾಡಿಕೊಂಡಿದ್ದೆ ಎಂದಿದ್ದಾನೆ. ಇನ್ನು ಆ ಬೈಕ್​ ಸಂಪೂರ್ಣ ಸುಟ್ಟು ಕರಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net