

ಲಖನೌ: ಅತ್ಯಾಚಾರಕ್ಕೆ ಪ್ರಾಯದ ಹಂಗಿಲ್ಲ. ಅತ್ಯಾಚಾರಿಗಳಿಗೂ ವಯಸ್ಸಿನ ಮಿತಿಯಿಲ್ಲ ಹಾಗೂ ಅತ್ಯಾಚಾರಕ್ಕೆ ಒಳಗಾಗುತ್ತಿರುವ ಹೆಂಗಳೆಯರ ವಯಸ್ಸನ್ನೂ ಕೇಳುವವರಿಲ್ಲ. ಭವಿಷ್ಯದ ಬಗ್ಗೆ ದೊಡ್ಡ ಕನಸು ಕಟ್ಟಿಕೊಂಡು ಬೆಳೆಯುತ್ತಿದ್ದ ಎಂಟು ವರ್ಷದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ರಾಜ್ಯದ ಬಿಜ್ನೋರ್ ಜಿಲ್ಲೆಯ ಪುಟ್ಟ ಹಳ್ಳಿಯೊಂದರಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಎಂಟು ವರ್ಷದ ಬಾಲಕಿ ತನ್ನ ಮನೆ ಅಂಗಳದಲ್ಲಿ ಆಟವಾಡುತ್ತಿದ್ದಳು. ಆ ಸಮಯಕ್ಕೆ ಅಲ್ಲಿಗೆ ಬಂದ 16 ವರ್ಷದ ಬಾಲಕ ಆಕೆಯನ್ನು ಯಾರಿಗೂ ತಿಳಿಯದಂತೆ ಹೊತ್ತೊಯ್ದಿದ್ದಾನೆ. ಆಕೆಯ ಬಾಯಿಯನ್ನು ಕೈನಲ್ಲಿ ಮುಚ್ಚಿ, ಅಲ್ಲೇ ಹತ್ತಿರದಲ್ಲಿ ಯಾರೂ ಇಲ್ಲದ ಸ್ಥಳಕ್ಕೆ ಆಕೆಯನ್ನು ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ.
ಅಷ್ಟೊತ್ತಿಗಾಗಲೇ ಬಾಲಕಿ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರಿಗೆ ತಿಳಿದುಬಂದಿದ್ದು ಹುಡುಕಾಟ ಆರಂಭಿಸಿದ್ದಾರೆ. ಪೋಷಕರು ಜೋರಾಗಿ ಆಕೆಯ ಹೆಸರನ್ನು ಕರೆಯುತ್ತ ಊರೆಲ್ಲ ಹುಡುಕಾಡಿದ್ದಾರೆ. ಆಕೆಯ ಹೆಸರನ್ನು ಕೂಗುತ್ತಿರುವುದು ಕೇಳುತ್ತಿದ್ದಂತೆ ಬಾಲಕಿ ಜೋರಾಗಿ ಅಳಲಾರಂಭಿಸಿದ್ದಾಳೆ. ಇನ್ನೂ ಇಲ್ಲೇ ಇದ್ದರೆ ಸಮಸ್ಯೆಯಾಗುತ್ತದೆ ಎಂದು ಅರಿತ ಬಾಲಕ ತನ್ನ ಪ್ಲಾನ್ ಚೇಂಜ್ ಮಾಡಿದ್ದಾನೆ. ಅವಳು ಕೂಗದಂತೆ ತಡೆಯಲು ಗಂಟಲನ್ನು ಬಟ್ಟೆಯಿಂದ ಸುತ್ತಿ ಎಳೆದಿದ್ದಾನೆ. ಬಾಲಕಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ಅತ್ಯಾಚಾರ ಮಾಡುವ ಯೋಜನೆ ಹಾಕಿಕೊಂಡು, ಅದರ ಬದಲಾಗಿ ಕೊಲೆ ಮಾಡಿದ ಆತ ಅಲ್ಲಿಂದ ಕಾಲ್ಕಿತ್ತು, ಅದೇ ಊರಿನಲ್ಲಿದ್ದ ತನ್ನ ಮನೆಗೆ ಬಂದಿದ್ದಾನೆ.
ಗ್ರಾಮಸ್ಥರ ಹೇಳಿಕೆಯ ಮೇರೆಗೆ ಬಾಲಕನ ಮೇಲೆ ಅನುಮಾನ ಬಂದು ಆತನನ್ನು ವಿಚಾರಣೆ ಮಾಡಲಾಗಿದೆ. ಪೊಲೀಸರನ್ನು ಕಂಡು ಹೆದರಿದ ಬಾಲಕ ಎಲ್ಲ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ. (ಏಜೆನ್ಸೀಸ್)