ವಿಜಯಪುರಕ್ಕೂ ಅಂಟಿದ ಶಿಕ್ಷಕರ ನೇಮಕಾತಿ ಅಕ್ರಮದ ನಂಟು! ಸಿಐಡಿ ವಶಕ್ಕೆ ಮತ್ತೊಬ್ಬ ಸರ್ಕಾರಿ ಪ್ರೌಢಶಾಲೆ ಶಿಕ್ಷಕ

New Project(36)
Published on

ವಿಜಯಪುರ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮದ ನಂಟು ಇದೀಗ ಗುಮ್ಮಟ ನಗರಿ ಖ್ಯಾತಿಯ ವಿಜಯಪುರಕ್ಕೂ ಅಂಟಿದ್ದು, ಮೂವರು ಶಿಕ್ಷಕರನ್ನು ಸಿಐಡಿ ವಿಚಾರಣೆಗೆ ಒಳಪಡಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಇಬ್ಬರು ಶಿಕ್ಷಕರನ್ನು ವಿಚಾರಣೆಗೆ ಕರೆದೊಯ್ದಿದ್ದ ಸಿಐಡಿ ಅಧಿಕಾರಿಗಳು ಇದೀಗ ಅಂದರೆ ಸೆ. 19ರಂದು ಸಂಜೆ ಮತ್ತೋರ್ವನನ್ನು ವಶಕ್ಕೆ ಪಡೆದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಎಫ್‌ಐಆರ್ ಪ್ರತಿ ತರಲು ಸಿಐಡಿ ಅಧಿಕಾರಿಗಳ ಬಳಿ ತೆರಳಲು ಸನ್ನದ್ಧರಾಗಿದ್ದಾರೆ.

ಯಾರು ಆ ಶಿಕ್ಷಕ?: ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಅಶೋಕ್ ಚವಾಣ್ ಸಿಐಡಿ ವಿಚಾರಣೆಗೆ ಒಳಪಟ್ಟ ಶಿಕ್ಷಕ.

ಮೂಲತಃ ವಿಜಯಪುರ ನಗರದಲ್ಲಿ ವಾಸವಾಗಿರುವ ಇವರು ಆರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಬಸವನಬಾಗೇವಾಡಿಯ ಭೈರವಾಡಗಿಗೆ ವರ್ಗವಾಗಿ ಬಂದಿದ್ದರು. ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದ ವಿಚಾರವಾಗಿ ಇವರನ್ನು ವಿಚಾರಣೆಗೆ ಒಳಪಡಿಸುತ್ತಿರುವುದಾಗಿ ಶಾಲೆ ಮುಖ್ಯಸ್ಥರಿಗೆ ಮಾಹಿತಿ ನೀಡಿ ಕರೆದೊಯ್ಯಲಾಗಿದೆ.

ಇದಕ್ಕೂ ಮೊದಲು ಕಪನಿಂಬರಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸಿದ್ರಾಮಪ್ಪ ಬಿರಾದಾರ ಹಾಗೂ ಹತ್ತಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮಹೇಶ ಸುಸಲಾದಿ ಸಿಐಡಿ ವಿಚಾರಣೆಗೆ ಒಳಪಟ್ಟಿದ್ದಾರೆ.

ಇನ್ನೂ ಒಬ್ಬ ಮಹಿಳೆ ಇದ್ದು ಆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸಿಐಡಿ ಅಧಿಕಾರಿಗಳಿಂದ ಶಿಕ್ಷಣ ಇಲಾಖೆಗೆ ಈವರೆಗೆ ಎಫ್‌ಐಆರ್ ಪ್ರತಿ ಬಂದಿಲ್ಲ. ತಾವೇ ಖುದ್ದಾಗಿ ಭೇಟಿ ನೀಡಿ ದೂರಿನ ಪ್ರತಿ ತಂದು ಕ್ರಮ ಕೈಗೊಳ್ಳುವುದಾಗಿ ಡಿಡಿಪಿಐ ಮಹೇಶ ಶಿರಹಟ್ಟಿಮಠ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net