

ಬೆಂಗಳೂರು: ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಡೆತ್‌ನೋಟ್ ಬರೆದಿಟ್ಟು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಶುಕ್ರವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ನರಸಿಂಹಮೂರ್ತಿ (೫೯) ಆತ್ಮಹತ್ಯೆ ಮಾಡಿಕೊಂಡವರು.
ನರಸಿಂಹ ಅವರು ಗುರುವಾರ ರಾತ್ರಿ ೧೨ ರ ವೇಳೆ ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಬೆಳಗ್ಗೆ ನರಸಿಂಹಮೂರ್ತಿ ಮಗ ತಂದೆಯ ಕೋಣೆಗೆ ಹೋಗಿ ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ಡೆತ್‌ನೋಟ್‌ನಲ್ಲಿ ಹೊಸಹಳ್ಳಿ ಸತೀಶ್ ಮತ್ತು ಸಂಬಂಧಿಕರು ಸೇರಿ ೫ ಮಂದಿಯ ವಿರುದ್ಧ ಮೃತ ನರಸಿಂಹ ಮೂರ್ತಿ ಆರೋಪ ಮಾಡಿದ್ದಾರೆ. ಮೃತನ ಪುತ್ರ ಪ್ರವೀಣ್ ಎಂಬುವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸಕೋಟೆಯ ಜಡಗನಹಳ್ಳಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ನರಸಿಂಹಮೂರ್ತಿ, ಜನವರಿ ೧೫ರಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಮಾಗಡಿ ರಸ್ತೆಯ ತುಂಗಾನಗರದಲ್ಲಿ ನರಸಿಂಹಮೂರ್ತಿ ೨೫ ಗುಂಟೆ ಜಮೀನು ಹೊಂದಿದ್ದರು. ಆ ಜಮೀನನ್ನು ೧೦ ಕೋಟಿ ರೂ.ಗೆ ಖರೀದಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಮುಖಂಡ ಸತೀಶ್ ೧೦ ಲಕ್ಷ ರೂ. ನೀಡಿ ಒಪ್ಪಂದ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಆದರೆ ಉಳಿದ ಹಣ ನೀಡದೆ ವಂಚಿಸಿದ್ದು, ಹಣ ಕೇಳಲು ಹೋದಾಗ ಧಮ್ಕಿ ಹಾಕಿದ್ದರು ಎಂದು ಡೆತ್‌ನೋಟ್‌ನಲ್ಲಿ ನರಸಿಂಹಮೂರ್ತಿ ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ಹೊಸಕೋಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್ ಮಾತನಾಡಿ, ನರಸಿಂಹ ಮೂರ್ತಿಯವರು ಕಳೆದ ೪ ತಿಂಗಳುಗಳಿಂದ ರಜೆ ಮೇಲೆ ತೆರಳಿದ್ದರು, ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆಗೆ ಒಳಪಟ್ಟದ್ದರು. ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.