ಇಂದು ಪುನೀತ್​ ನಿವಾಸಕ್ಕೆ ಬಂದ ತಮಿಳುನಾಡು ಸಿಎಂ ಪುತ್ರ: ಅಂದು ಶಿವಣ್ಣನಿಗೆ ಭಾವನಾತ್ಮಕ ಪತ್ರ ಬರೆದಿದ್ದ ಸ್ಟಾಲಿನ್​

Puneeth
Published on

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ನಿವಾಸಕ್ಕೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್​ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅ.29ರಂದು ಅಪ್ಪು ನಿಧನರಾದ ಸುದ್ದಿ ಕೇಳಿ ಆಘಾತಗೊಂಡ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​ ಅವರು ಶಿವರಾಜ್​ಕುಮಾರ್​ ಅವರಿಗೆ ಭಾವನಾತ್ಮಕ ಪತ್ರ ಬರೆದು, ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿದ್ದರು. 'ನಮ್ಮ ತಂದೆ ಕರುಣಾನಿಧಿ ಅವರು ಮೃತಪಟ್ಟ ಸಂದರ್ಭದಲ್ಲಿ ನಟ ಪುನೀತ್​ ರಾಜಕ್​ಕುಮಾರ್​ ಅವರು ನಮ್ಮ ಗೋಪಾಲಪುರಂ ನಿವಾಸಕ್ಕೆ ಬಂದು ನಿಮ್ಮ ಕುಟುಂಬದ ಪರವಾಗಿ ನಮಗೆ ಸಾಂತ್ವನ ಹೇಳಿದ್ದರು. ಇದು ನಮ್ಮ ಹೃದಯದಲ್ಲಿ ಇನ್ನೂ ಹಸಿರಾಗಿಯೇ ಇದೆ. ಇಂತಹ ಮಹಾನ್​ ವ್ಯಕ್ತಿತ್ವವುಳ್ಳ ಅಪ್ಪು ಅವರನ್ನ ಕಳೆದುಕೊಂಡ ದುಃಖದಲ್ಲಿರುವ ನಿಮ್ಮ ಕುಟುಂಬಕ್ಕೂ ಮತ್ತು ಅಪ್ಪು ಅವರನ್ನು ಪ್ರೀತಿಸುವ ಅಭಿಮಾನಿಗಳಿಗೆ ನಾನು ನೋವಿನಿಂದಲೇ ಸಾಂತ್ವನ ಹೇಳುತ್ತಿರುವೆ. ಪುನೀತ್​ರ ನಿಧನ ಸುದ್ದಿ ಕೇಳಿ ನನಗೆ ತುಂಬಾ ವೇದನೆ ಆಯ್ತು. ನಮ್ಮ ಹಾಗೂ ರಾಜ್​ ಕುಟುಂಬದ ನಡುವೆ ಹಲವು ವರ್ಷಗಳ ನಂಟು ಇದೆ. ಪುನೀತ್​ ನಿಧನ ನನಗೆ ವೈಯಕ್ತಿಕವಾಗಿ ತುಂಬಾ ನಷ್ಟವನ್ನುಂಟು ಮಾಡಿದೆ' ಎಂದಿದ್ದರು.

ತಮಿಳುನಾಡು ಸಿಎಂ ಸ್ಟಾಲಿನ್​ ಮತ್ತು ಅವರ ಮಗ ಉದಯನಿಧಿ.
ತಮಿಳುನಾಡು ಸಿಎಂ ಸ್ಟಾಲಿನ್​ ಮತ್ತು ಅವರ ಮಗ ಉದಯನಿಧಿ.

ಅಪ್ಪು ನಮ್ಮನ್ನು ಅಗಲಿ ಇಂದಿಗೆ(ನ.9) 12 ದಿನ. ಆದರೆ ಅಪ್ಪು ಇನ್ನಿಲ್ಲ ಎಂಬ ನೋವು ಮಾತ್ರ ಅಭಿಮಾನಿಗಳ ಮನದಲ್ಲಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಪ್ರತಿನಿತ್ಯ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿಗೆ ಸಹಸ್ರಾರು ಮಂದಿ ಭಾರವಾದ ಮನಸ್ಸಿನಲ್ಲೇ ಹೆಜ್ಜೆ ಇಟ್ಟು ಪುನೀತ್​ಗೆ ನಮಿಸುತ್ತಿದ್ದಾರೆ. ಟಾಲಿವುಡ್​, ಕಾಲಿವುಡ್​ನ ಸಿನಿತಾರೆಯರೂ ಭೇಟಿ ಕೊಡುತ್ತಿದ್ದಾರೆ. ಅಪ್ಪು ನಿವಾಸಕ್ಕೆ ನಿತ್ಯ ಗಣ್ಯರ ದಂಡೇ ಬರುತ್ತಿದೆ. ರಾಷ್ಟ್ರಮಟ್ಟದ ನಾಯಕರೂ ಅಪ್ಪು ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net