

ಕಲಬುರಗಿ: ಕರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೂ ಹದಿನಾಲ್ಕು ದಿನಗಳ ಕಾಲ ಮನೆಯಲ್ಲೇ ಸ್ವಯಂ ಕ್ವಾರಂಟೈನ್‌ನಲ್ಲಿ ಇರಬೇಕು ಎಂಬ ನಿಯಮ ಇದೆ. ಈ ನಿಯಮವನ್ನು ಉಲ್ಲಂಘಿಸಿದವನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ನಗರದ ಓಲ್ಡ್ ಸಿಟಿಯ ಕುಸುಮ್ ಗಲ್ಲಿ ನಿವಾಸಿ ಶೊಯೋಬೊದ್ದಿನ್ ಇಸುಫೋದ್ದಿನ್ ಕಚೇರಿವಾಲೆ (38) ಎಂಬಾತನೇ 14 ದಿನ ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕೆಂಬ ನಿಯಮ ಪಾಲನೆ ಮಾಡದೇ ಮೊಂಡುತನ ಮಾಡಿದವನು.
ಕರೊನಾ ಸೋಂಕಿನಿಂದ ಈತ ಮಾರ್ಚ್ 31ರಿಂದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಗುಣಮುಖನಾಗಿ ನಿನ್ನೆ ರಾತ್ರಿ 9 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದ.
14 ದಿನ ಮನೆ ಬಿಟ್ಟು ಹೊರಬರದಂತೆ ಈತನ ಕೈ ಮೇಲೆ ಸೀಲ್ ಹೊಡೆಯಲಾಗಿತ್ತು. ಇದನ್ನು ಕಡ್ಡಾಯ ಪಾಲಿಸಲು ಜಿಲ್ಲಾಧಿಕಾರಿ ತಿಳಿಸಿದ್ದರು. ಆದರೂ ಗುರುವಾರ ರಂಗಮಂದಿರದ ಹತ್ತಿರವಿರುವ ಅವರ ಅಣ್ಣನ ಮನೆಗೆ ಬಂದಿದ್ದ. ಅಲ್ಲಿಂದ ಹೋಗುತ್ತಿದ್ದಾಗ ಜನ ನೋಡಿ ಪೊಲೀಸರಿಗೆ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆಯ ಆರೋಪದ ಮೇಲೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಕೈಗೊಂಡಿದ್ದಾರೆ.