ಹೆತ್ತ ತಾಯಿಗಾಗಿ 10 ವರ್ಷಗಳಿಂದ ಹುಡುಕಾಟ: ಸ್ವಿಟ್ಜರ್ಲೆಂಡ್​ನಿಂದ ಮುಂಬೈಗೆ ಬಂದ ಯುವತಿಗೆ ಗಂಡನ ಸಾಥ್​!

Vidhya Philippon
Published on

ಮುಂಬೈ: ಯಾರು ಎಷ್ಟೇ ಚೆನ್ನಾಗಿ ನೋಡಿಕೊಂಡರು ಸಹ ಹೆತ್ತ ತಾಯಿ ಮತ್ತು ಹೆತ್ತ ಕರುಳಿನ ಸಂಬಂಧಗಳ ಮುಂದೆ ಎಲ್ಲವೂ ಗೌಣ. ಅದೇ ರೀತಿ ಎಲ್ಲೋ ಹುಟ್ಟಿ ಇನ್ನೆಲ್ಲೋ ಬದುಕು ಕಟ್ಟಿಕೊಂಡರೂ ಸಹ ಹುಟ್ಟಿನ ಮೂಲ ಕಂಡುಕೊಳ್ಳುವ ಬಯಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದೇ ಬಯಕೆಯೊಂದಿಗೆ ಸ್ವಿಟ್ಜರ್​ಲೆಂಡ್​ನಿಂದ ಭಾರತಕ್ಕೆ ಬಂದಿರುವ ವಿದ್ಯಾ ಫಿಲಿಪ್ಪನ್, ಕಳೆದ 10 ವರ್ಷಗಳಿಂದ ಮುಂಬೈ ಬೀದಿಗಳಲ್ಲಿ ತನಗೆ ಜನ್ಮಕೊಟ್ಟ ತಾಯಿಯ ಹುಡುಕಾಟದಲ್ಲಿದ್ದಾರೆ. ಆದರೆ, ಈವರೆಗೂ ಅವರ ತಾಯಿಯ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.

ಅಂದಹಾಗೆ ವಿದ್ಯಾ ಫಿಲಿಪ್ಪನ್​ ಬಳಿ ತಮ್ಮ ತಾಯಿಯ ಸರ್​ನೇಮ್​ ಮತ್ತು ವಿಳಾಸದ ಮಾಹಿತಿ ಇದೆ. ಆದರೆ, ಬೇಸರದ ಸಂಗತಿ ಏನೆಂದರೆ, ಆ ವಿಳಾಸ ಈಗ ಅಸ್ತಿತ್ವದಲ್ಲಿ ಇಲ್ಲ. 1996, ಫೆಬ್ರವರಿ 18ರಂದು ವಿದ್ಯಾ ಜನಿಸಿದರು. ಆದರೆ, ಅವರ ತಾಯಿ ಆಕೆಯನ್ನು ಮಿಷನರೀಸ್​ ಆಫ್​ ಚಾರಿಟಿಯಲ್ಲೇ ಬಿಟ್ಟು ಹೋದರು. ಬಳಿಕ ಆಕೆಯನ್ನು 1997ರಲ್ಲಿ ಸ್ವಿಟ್ಜರ್​ಲೆಂಡ್​ ಮೂಲದ ದಂಪತಿ ದತ್ತು ಪಡೆದು ತಮ್ಮೊಂದಿಗೆ ಕರೆದೊಯ್ದರು.

ಸ್ವಿಟ್ಜರ್​ಲೆಂಡ್​ನಲ್ಲಿ ಬೆಳೆದ ವಿದ್ಯಾ, ಇದೀಗ ತಮ್ಮ ಮೂಲ ಬೇರನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾರೆ. ಮುಂಬೈನ ಪೂರ್ವ ದಹಿಸರ್​ನ ರಾವಲ್​ಪಡಾದಲ್ಲಿ ತಾಯಿಗಾಗಿ ಕಳೆದ 10 ವರ್ಷಗಳಿಂದ ಹುಡುಕಾಡುತ್ತಿದ್ದಾರೆ.​ ತಮ್ಮ ತಾಯಿ ತನ್ನನ್ನು ತೊರೆದ, ವೈಲ್ ಪಾರ್ಲೆಯಲ್ಲಿರುವ ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಗೂ ಭೇಟಿ ನೀಡಿ ವಿಚಾರಿಸಿದ್ದಾರೆ. ಅಲ್ಲದೆ, ತಾಯಿ ಉಳಿದುಕೊಳ್ಳುತ್ತಿದ್ದ ದಹಿಸರ್​ ಏರಿಯಾಗೂ ಭೇಟಿ ನೀಡಿದ್ದಾರೆ. ಆದರೆ, ತಾಯಿಯ ವಿಳಾಸ ಇದೀಗ ಅಸ್ತಿತ್ವದಲ್ಲಿ ಇಲ್ಲ. ಆದರೆ, ಒಂದಲ್ಲ ಒಂದು ದಿನ ತಮ್ಮ ಹೆತ್ತ ತಾಯಿಯನ್ನು ಹುಡುಕುತ್ತೇನೆ ಎಂಬ ಭರವಸೆ ವಿದ್ಯಾ ಬಳಿ ಇದೆ. ಇದೇ ಭರವಸೆಯೊಂದಿಗೆ ತಮ್ಮ ಹುಡುಕಾಟವನ್ನು ಮುಂದುವರಿಸಿದ್ದಾರೆ.

ತಾಯಿಯನ್ನು ಹುಡುಕುತ್ತಿರುವ ವಿದ್ಯಾಗೆ ಸಹಾಯ ಮಾಡುತ್ತಿರುವ ದತ್ತು ಹಕ್ಕುಗಳ ಮಂಡಳಿಯ ನಿರ್ದೇಶಕರಾದ ವಕೀಲೆ ಅಂಜಲಿ ಪವಾರ್ ಮಾತನಾಡಿ, ಸ್ವಿಟ್ಜರ್ಲೆಂಡ್‌ನಿಂದ ಬಂದ ವಿದ್ಯಾ ಫಿಲಿಪ್ಪನ್‌ಗೆ ಅವರ ಹೆತ್ತ ತಾಯಿಯನ್ನು ಹುಡುಕಲು ನಾವು ಸಹಾಯ ಮಾಡುತ್ತಿದ್ದೇವೆ. ಮಿಷನರಿ ಚಾರಿಟಿಯು ಸಹ ಹುಡುಕಾಟದಲ್ಲಿ ನಮಗೆ ಸಹಾಯ ಮಾಡಿದೆ ಮತ್ತು ವಿದ್ಯಾ ತಾಯಿಯ ಬಗ್ಗೆ ಕೆಲವು ಮಾಹಿತಿಯನ್ನು ನೀಡಿದೆ. ಅದರ ಪ್ರಕಾರ ವಿಳಾಸವು ದಹಿಸರ್ ಪ್ರದೇಶವೆಂದು ತೋರಿತು. ಆದರೆ, ವೇಗವಾಗಿ ಬೆಳೆಯುತ್ತಿರುವ ನಗರವಾದ್ದರಿಂದ ಮತ್ತು ಜನರು ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದರಿಂದ ಹುಡುಕಾಟ ಕಷ್ಟಕರವಾಗಿದೆ ಎಂದು ಹೇಳಿದರು.

ವಿದ್ಯಾ ಅವರ ತಾಯಿಯನ್ನು ಹುಡುಕಲು ನೆರವಾಗುವಂತೆ ವಕೀಲೆ ಜನರಲ್ಲಿ ಮನವಿ ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತೆಯೊಬ್ಬರು ನಮಗೆ ಸಹಾಯ ಮಾಡುತ್ತಿದ್ದಾರೆ. ವಿದ್ಯಾ ಅವರ ತಾಯಿಯ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಕುಟುಂಬಕ್ಕೆ 'ಕಾಂಬ್ಳಿ' ಎಂಬ ಉಪನಾಮವಿದೆ. ವಿದ್ಯಾರ ಹೆತ್ತ ತಾಯಿಯನ್ನು ಕಂಡುಹಿಡಿಯಲು ಆ ಸಮಯದಲ್ಲಿ ದಹಿಸರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರಲ್ಲಿ ನಾನು ವಿನಂತಿಸುತ್ತೇನೆ ಎಂದಿದ್ದಾರೆ.

ಎಎನ್​ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ವಿದ್ಯಾ, ನನ್ನ ತಾಯಿಯನ್ನು ಹುಡುಕಲು ಅಂಜಲಿ ಅವರು ನನಗೆ ಸಹಾಯ ಮಾಡುತ್ತಿದ್ದಾರೆ. ನನ್ನ ತಾಯಿ ನನಗೆ ಜನ್ಮ ನೀಡಿದಾಗ ಅವರಿಗೆ 20 ವರ್ಷ ವಯಸ್ಸಾಗಿತ್ತು ಮತ್ತು 10 ವರ್ಷಗಳಿಂದ ನಾನು ಅವರಿಗಾಗಿ ಹುಡುಕುತ್ತಿದ್ದೇನೆ. ನಾನು ನನ್ನ ಪತಿಯೊಂದಿಗೆ ಭಾರತಕ್ಕೆ ಬಂದಿದ್ದೇನೆ. ನನ್ನ ಕುಟುಂಬದ ಉಪನಾಮ ಕಾಂಬ್ಳಿ ಎಂದು. ಮುಂಬೈನಲ್ಲಿರುವ ಜನರು ನನ್ನ ತಾಯಿಯನ್ನು ಹುಡುಕಲು ಮತ್ತು ಅವರ ಬಗ್ಗೆ ನನಗೆ ಮಾಹಿತಿ ನೀಡಲು ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ವಿದ್ಯಾ ಹೇಳಿದ್ದರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net