ಈಶ್ವರಪ್ಪರ ಮನೆಗೆ ಸ್ವಾಮೀಜಿಗಳ ಭೇಟಿ: ವಿಚಲಿತರಾಗದಂತೆ ಧೈರ್ಯ ತುಂಬಿದ ಶ್ರೀಗಳು

New Project(1)
Published on

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೆ.ಎಸ್​.ಈಶ್ವರಪ್ಪ ಅವರಿಗೆ ಹಲವು ಮಠದ ಸ್ವಾಮೀಜಿಗಳು ಧೈರ್ಯ ತುಂಬಿದ್ದಾರೆ.

ಶನಿವಾರ ಬೆಳಗ್ಗೆ ಈಶ್ವರಪ್ಪರ ನಿವಾಸಕ್ಕೆ ಭೇಟಿ ನೀಡಿದ ಕಾಗಿನೆಲೆ ಕನಕ ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮ ಸ್ವಾಮೀಜಿ, ಮಾದರ ಚನ್ನಯ್ಯ ಗುರುಪೀಠದ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ, ಮಾದರ ಗುರುಪೀಠದ ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀ ಮಡಿವಾಳ ಮಾಚಿದೇವ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ, ಭಗೀರಥ ಮಹಾಸಂಸ್ಥಾನದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕನಕ ಗುರುಪೀಠ ಶಾಖೆಯ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶಿವಮೊಗ್ಗ ಶ್ರೀ ನಾರಾಯಾಣಗುರು ಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ, ಯಡಿಯೂರಿನ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವರು ಭೇಟಿ ನೀಡಿ ಅರ್ಧಗಂಟೆಗೂ ಅಧಿಕ ಸಮಯ ಚರ್ಚೆ ನಡೆಸಿದರು. ಮಾಜಿ ಸಚಿವರಿಗೆ ವಿಚಲಿತರಾಗದಂತೆ ಧೈರ್ಯ ತುಂಬಿದರು. ಶ್ರೀಗಳ ದಿಢೀರ್ ಭೇಟಿಯಿಂದ ಈಶ್ವರಪ್ಪ ಅಚ್ಚರಿಪಟ್ಟರು. ಇದೇ ವೇಳೆ ತನ್ನ ಮೊಮ್ಮಗನ ವಿವಾಹಕ್ಕೆ ಆಗಮಿಸುವಂತೆ ಸ್ವಾಮೀಜಿಗಳಿಗೆ ಈಶ್ವರಪ್ಪ ಆಮಂತ್ರಣ ಪತ್ರಿಕೆ ನೀಡಿದರು.

ಸ್ವಾಮೀಜಿಗಳ ನಿಯೋಗ ಭೇಟಿ ಕೊಟ್ಟಿದ್ದ ವೇಳೆಯೇ ಈಶ್ವರಪ್ಪಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಮಂತ್ರಾಲಯದ ಸುಭುದೇಂದ್ರ ಶ್ರೀಗಳು‌, ಎಲ್ಲರೂ ನಿಮ್ಮ ಪರವಾಗಿ ಇದ್ದೇವೆ ಎಂದು ಅಭಯ ನೀಡಿದರು.

ಪ್ರತಿ ಹುಣ್ಣಿಮೆಯ ದಿನ ಮನೆಯಲ್ಲಿ ವಿಶೇಷ ಪೂಜೆ ಇರುತ್ತೆ. ಇವತ್ತು ಕೂಡ ಹುಣ್ಣಿಮೆ ಪೂಜೆ ಜೊತೆಗೆ ಸತ್ಯನಾರಾಯಣ ಪೂಜೆ ಮಾಡುತ್ತಿದ್ದೆವು. ಇದೇ ವೇಳೆ ಸ್ವಾಮೀಜಿಗಳು ನಮ್ಮ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರು ಬರುವ ಕಲ್ಪನೆ ಸಹ ನನಗೆ ಇರಲಿಲ್ಲ‌. ಪೂಜೆಯ ಸಮಯಕ್ಕೆ ದೇವರ ರೀತಿ ಬಂದು ಅವರೆಲ್ಲರೂ ಆಶೀರ್ವಾದ ಮಾಡಿದ್ದಾರೆ. ಯಾವ ಲೋಪವೂ ಇಲ್ಲದೇ, ನಿರ್ದೋಷಿಯಾಗಿ ಹೊರಗೆ ಬರ್ತೀರಾ ಎಂದು ಅಭಯ ನೀಡಿದ್ದಾರೆ. ನಾನೇನು ಕುಗ್ಗಿರಲಿಲ್ಲ. ನನಗೆ ಆನೆಬಲದಷ್ಟು ಧೈರ್ಯ ಬಂದಿದೆ. ಎಲ್ಲಾ ಶ್ರೀಗಳು ಅಶೀರ್ವಾದ ಮಾಡಿದ್ದು ನನಗೆ ಪೂರ್ವ ಜನ್ಮದ ಪುಣ್ಯ. ಮಂತ್ರಾಲಯದ ಶ್ರೀಗಳು ಕರೆ ಮಾಡಿದ್ದರು. ರಾಯರ ಭಕ್ತರು ನೀವು. ನಿಮಗೆ ಒಳ್ಳೆಯದಾಗುತ್ತೆ ಎಂದು ಹರಸಿದ್ದಾರೆ. ಪರಿವಾರದ ಹಿರಿಯರು ಹಾಗೂ ಪಕ್ಷ ಹಾಗೂ ಸರ್ಕಾರಕ್ಕೆ ಇರಿಸು-ಮುರಿಸು ಅಗಬಾರದು. ಹಾಗಾಗಿ ರಾಜೀನಾಮೆ ಕೊಟ್ಟಿದ್ದೇನೆ. ರಾಜ್ಯ ನಾಯಕರ ಜೊತೆ ಮಾತಾಡಿಯೇ ನಿರ್ಧಾರ ಮಾಡಿದ್ದೇನೆ ಎಂದು ಈಶ್ವರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net