ಪಶ್ಚಿಮಘಟ್ಟ ‘ಧಾರಣಾಶಕ್ತಿ’ ಅಧ್ಯಯನ: ಈಶ್ವರ ಖಂಡ್ರೆ ಸೂಚನೆ | 3 Months deadline

Eshwar Khandre
Published on

ಬೆಂಗಳೂರು: ಮಂಗಳೂರು ಬಳಿ ಗುಡ್ಡ ಕುಸಿತ ಪ್ರಕರಣದ ನಂತರ ಪಶ್ಚಿಮಘಟ್ಟದ ಧಾರಣಾಶಕ್ತಿಯತ್ತ ರಾಜ್ಯ ಸರ್ಕಾರ ಮತ್ತೆ ಗಮನಹರಿಸಿ, ವಸ್ತುಸ್ಥಿತಿ ಅಧ್ಯಯನದ ವರದಿ ತರಿಸಿಕೊಳ್ಳಲು ಮುಂದಾಗಿದೆ.

ದಕ್ಷಿಣ ಕನ್ನಡ, ಕೊಡಗು ಮೊದಲಾದ ಭಾಗದಲ್ಲಿ ಮುಂಗಾರು ಪೂರ್ವ ಮಳೆಗೇ ಭೂಕುಸಿತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಅರಣ್ಯ ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ಸೂಚನೆ ನೀಡಿರುವ ಅವರು, ಪಶ್ಚಿಮ ಘಟ್ಟದಲ್ಲಿ ಹಲವು ರಸ್ತೆ, ಮತ್ತಿತರ ಯೋಜನೆಗಳು ಕಾರ್ಯಗತವಾಗುತ್ತಿದ್ದು, ಇದರಿಂದ ಘಟ್ಟ ಅಪಾಯಕ್ಕೆ ಸಿಲುಕಿದೆ, ಆಸ್ತಿಹಾನಿ, ಬೆಳೆ ಹಾನಿ, ಜೀವಿಹಾನಿಯ ಜೊತೆಗೆ ವನ್ಯ ಜೀವಿಗಳೂ ಸಂಕಷ್ಟ ಎದುರಿಸುವಂತಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.

ತಜ್ಞರ ಭೀತಿ

ಪಶ್ಚಿಮಘಟ್ಟ ಕ್ಷೀಣಿಸಿದರೆ ಮುಂಬರುವ ದಿನಮಾನಗಳಲ್ಲಿ ತೀವ್ರ ಜಲಕ್ಷಾಮ ಎದುರಾಗುವ ಭೀತಿಯಿದೆ ಎಂಬ ತಜ್ಞರ ಅಭಿಪ್ರಾಯ ಉಲ್ಲೇಖಿಸಿರುವ ಅವರು ಈ ನಿಟ್ಟಿನಲ್ಲಿ ಅಧ್ಯಯನ ಮಾಡಿ ಮೂರು ತಿಂಗಳೊಳಗೆ ಪಶ್ಚಿಮಘಟ್ಟದ ತಾಳಿಕೊಳ್ಳುವ ಸಾಮರ್ಥ್ಯ ಬಗ್ಗೆ ವರದಿ ಸಲ್ಲಿಸಲು ಇಲಾಖೆ ಉನ್ನತಾಧಿಕಾರಿಗೆ ನಿರ್ದೇಶಿಸಿದ್ದಾರೆ.

ಜೀವವೈವಿಧ್ಯತೆಯ ತಾಣವಾದ ಪಶ್ಚಿಮಘಟ್ಟದಲ್ಲಿ ಕರ್ನಾಟಕದ ಅರಣ್ಯಗಳ ಪೈಕಿ ಶೇ.60ರಷ್ಟು ಅರಣ್ಯ ಪ್ರದೇಶ ಇದ್ದು, ಇದು ಸಸ್ಯಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲಗಳ ನೆಲೆವೀಡಾಗಿದೆ. ಪಶ್ಚಿಮಘಟ್ಟಗಳು ಮಳೆಯ ಮಾರುತ ತಡೆದು ಮಳೆ ಸುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿರುವ ಸಚಿವ ಈಶ್ವರ ಖಂಡ್ರೆ, ಪಶ್ಚಿಮ ಘಟ್ಟದ ಪ್ರಾಮುಖ್ಯತೆ, ಸಂರಕ್ಷಣೆಯ ಮನವರಿಕೆ ಮಾಡಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net