

ಬೆಂಗಳೂರು: ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭೈರವೇಶ್ವರನಗರ ನಿವಾಸಿ ಶ್ರೇಯಸ್(೧೬) ಆತ್ಮಹತ್ಯೆ ಮಾಡಿಕೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ. ಶುಕ್ರವಾರ ಸಂಜೆ ೫ ಗಂಟೆಗೆ ಈ ಘಟನೆ ನಡೆದಿದೆ. ಆಟೋ ಚಾಲಕ ಸಿದ್ದಪ್ಪ ಮತ್ತು ಖಾಸಗಿ ಶಾಲಾ ಶಿಕ್ಷಕಿಯಾಗಿರುವ ನಳಿನಾ ಅವರ ಪುತ್ರ ಶ್ರೇಯಸ್ ಬಾಗಲಗುಂಟೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ. ಒಂದೆರಡು ದಿನಗಳಿಂದ ಶ್ರೇಯಸ್ ಯಾವುದೋ ವಿಚಾರಕ್ಕೆ ಬೇಸರಗೊಂಡಿದ್ದ ಎಂದು ಹೇಳಲಾಗಿದೆ. ಶುಕ್ರವಾರ ಬೆಳಗ್ಗೆ ತಂದೆ ಸಿದ್ದಪ್ಪ ಆಟೋ ಬಾಡಿಗೆಗೆ ಹೋಗಿದ್ದರೆ, ತಾಯಿ ನಳಿನಾ ಶಾಲೆಗೆ ಹೋಗಿದ್ದರು. ಆದರೆ, ಶ್ರೇಯಸ್, ಶಾಲೆಗೆ ಹೋಗದೆ ಮನೆಯಲ್ಲೇ ಇದ್ದ. ಈ ವೇಳೆ ಬೆಡ್‌ರೂಮ್‌ನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ ೫ ಗಂಟೆ ಸುಮಾರಿಗೆ ತಾಯಿ ನಳಿನಾ ಶಾಲೆಯಿಂದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪಾಲಕರು ಕೂಡ ಪುತ್ರನ ಆತ್ಮಹತ್ಯೆ ಬಗ್ಗೆ ಆಘಾತಕ್ಕೊಳಗಾಗಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.