ಮಾಲ್‌ನ ನಾಲ್ಕನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

sucide
Published on

ಬೆಂಗಳೂರು: ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಆಯ್ಕೆ ಆಗದಕ್ಕೆ ಬೇಸರಗೊಂಡಿದ್ದ ವಿದ್ಯಾರ್ಥಿಯೊಬ್ಬ ಬನ್ನೇರುಘಟ್ಟ ರಸ್ತೆಯಲ್ಲಿರುವ ವೆಗಾಸಿಟಿ ಮಾಲ್‌ನಲ್ಲಿ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜೆ.ಪಿ.ನಗರ ನಿವಾಸಿ ಸುಹಾಸ್ ಅಡಿಗ(೨೧) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಶುಕ್ರವಾರ ಮಧ್ಯಾಹ್ನ ೨.೩೦ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಟೆಕ್ಸ್‌ಟೈಲ್ಸ್‌ನಲ್ಲಿ ಮ್ಯಾನೆಜರ್ ಆಗಿರುವ ವಾಸುದೇವ ಅಡಿಗ ಪುತ್ರ ಸುಹಾಸ್ ಅಡಿಗ ಮತ್ತು ಪುತ್ರಿ ಹಾಗೂ ಪತ್ನಿ ಜತೆ ಜೆ.ಪಿ.ನಗರದಲ್ಲಿ ವಾಸವಾಗಿದ್ದಾರೆ. ಸುಹಾಸ್ ಅಡಿಗ ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮುಗಿಸಿದ್ದಾನೆ. ಕೆಲ ತಿಂಗಳ ಹಿಂದೆ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ಇತ್ತು. ಅದರಲ್ಲಿ ಸುಭಾಷ್ ಆಯ್ಕೆ ಆಗಿರಲಿಲ್ಲ. ಇದರಿಂದ ತಾನೂ ಉತ್ತಮ ವ್ಯಾಸಂಗ ಮತ್ತು ಅಂಕ ಪಡೆದಿದ್ದರೂ ಆಯ್ಕೆ ಆಗದಿರುವುದಕ್ಕೆ ೨-೩ ತಿಂಗಳಿಂದ ಬೇಸರ ಮಾಡಿಕೊಂಡಿದ್ದ. ಮನೆಯಲ್ಲಿ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಆತನ ಪಾಲಕರು ಮಾಹಿತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಾನು ಇರುವುದಿಲ್ಲ:
ಶುಕ್ರವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಸ್ನೇಹಿತನೊಬ್ಬನಿಗೆ ಕರೆ ಮಾಡಿದ್ದ ಸುಭಾಷ್ ಅಡಿಗ, ‘ಕ್ಯಾಂಪಸ್ ಆಯ್ಕೆ ಆಗದಿರುವುದಕ್ಕೆ ಬಹಳ ಬೇಸರವಾಗಿದೆ. ನಾನು ಇರುವುದಿಲ್ಲ’ ಎಂದು ಹೇಳಿಕೊಂಡಿದ್ದ. ಆ ನಂತರ ಬನ್ನೇರುಘಟ್ಟ ರಸ್ತೆಯಲ್ಲಿರು ವೆಗಾಸಿಟಿ ಮಾಲ್‌ಗೆ ಮಧ್ಯಾಹ್ನ ಬೈಕ್‌ನಲ್ಲಿ ಒಬ್ಬನೇ ಬಂದು, ಒಳ ಹೋಗಿದ್ದಾನೆ. ಬಳಿಕ ೪ನೇ ಮಹಡಿಗೆ ಹೋಗಿ ಹೆಲ್ಮೆಟ್ ಇಟ್ಟು, ಚಪ್ಪಲಿ ಬಿಟ್ಟು ಜಿಗಿದಿದ್ದು, ಮಾಲ್‌ನ ಮಧ್ಯ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿ, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೂಡಲೇ ಮಾಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಕೂಡ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net