ಲೋಕ ಸಮರ 2024: ಕೇಸರಿ v/s ಗಜಕೇಸರಿ ಕಾಳಗ! ಗೆಲುವಿನ ಬಗ್ಗೆ 'ಕೈ' ಅಭ್ಯರ್ಥಿ ಹೇಳಿದ್ದಿಷ್ಟು

WhatsApp Image 2024-04-05 at 2.33.53 PM
Published on

ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್​ ಲೋಕಸಭೆ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ಸ್ಪರ್ಧೆಯ ಬಗ್ಗೆ ಎರಡು ಪಕ್ಷಗಳಲ್ಲಿ ಪೈಪೋಟಿ ಶುರುವಾಗಿದ್ದರೆ, ಮತ್ತೊಂದೆಡೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್​ ಮತ್ತು ಅಭ್ಯರ್ಥಿಯಾಗಿರುವ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ನಡುವಿನ ಮನಸ್ತಾಪ ಸದ್ಯ ಬೂದಿ ಮುಚ್ಚಿದ ಕೆಂಡಂತಿದೆ.

ಸದ್ಯ ಬಾಗಲಕೋಟೆ ಲೋಕ ಸಮರದ ಹಿನ್ನೆಲೆ ಕೇಸರಿ(ಬಿಜೆಪಿ ಅಭ್ಯರ್ಥಿ) ಹಾಗೂ ಗಜಕೇಸರಿ (ಕೈ ಅಭ್ಯರ್ಥಿ ತನ್ನದು ಗಜಕೇಸರಿ ಯೋಗ ಅಂದಿದ್ದು) ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಕುರಿತು ಇಂದು ವಿಜಯವಾಣಿ ಜತೆಗೆ ಮಾತನಾಡಿದ ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ, "ಯಾರು ಪ್ರಾಮಾಣಿಕವಾಗಿ ಜನರ ಸೇವೆ ಮಾಡ್ತಾರೋ ಅವರಿಗೆ ಗೆಲುವು ಒಲಿಯಬೇಕು" ಎಂದರು.

"ಕೇಸರಿಯೋ ಅಥವಾ ಗಜಕೇಸರಿಯೋ ಎಂಬುದಕ್ಕೆ ಉತ್ತರ ಕಾದು ನೋಡಿ ಅಂತೀನಿ. ಹಾಲಿ ಸಂಸದ ಗದ್ದಿಗೌಡರಷ್ಟು ರಾಜಕೀಯ ಅನುಭವ ನನಗಿಲ್ಲ. ಆದರೆ, ಅಭಿವೃದ್ದಿಪರ ಕಾಳಜಿ ಇದೆ. ಅವರಿಗೆ 20 ವರ್ಷ ಅವಕಾಶ ಕೊಟ್ಟಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಅಂತ ಕೇಳ್ತಿದ್ದೇನೆ ಅಷ್ಟೇ. ಬಿಜೆಪಿ ಹಾಗೂ ಜೆಡಿಎಸ್​ನ ಕೆಲವು ಅಸಮಾಧಾನಿತರು ನಮ್ಮನ್ನು ಬೆಂಬಲಿಸುತ್ತಾರೆ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net